ಸಮಗ್ರ ನ್ಯೂಸ್: ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡು ಅದ್ಭುತವಾಗಿ ಸ್ಯಾಂಡ್ ಆರ್ಟ್ ಪ್ರದರ್ಶಿಸುವ ಮೂಲಕ ಪುತ್ತೂರಿನ ಕಲ್ಲಾರೆಯ ‘ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ’ಯ ಐವರು ವಿದ್ಯಾರ್ಥಿಗಳು ಏಷ್ಯನ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ್ದಾರೆ. ಇವರ ಸಾಧನೆಗೆ ಸಾಥ್ ನೀಡಿದ್ದ 8 ಮಂದಿ ಹಿನ್ನೆಲೆ ಗಾಯಕರಿಗೂ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಗೌರವ ಲಭಿಸಿದೆ.
ಈ ಹಿಂದೆ ಇದೇ ಸಂಸ್ಥೆಯ ಶಮಿಕ ಎಂ.ಕೆ. ಎಂಬ ವಿದ್ಯಾರ್ಥಿನಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಹಿನ್ನೆಲೆ ಗಾಯನದೊಂದಿಗೆ ನಿರಂತರ 24 ಗಂಟೆಗಳಲ್ಲಿ ಸುಮಾರು 300 ಸ್ಯಾಂಡ್ ಆರ್ಟ್ ಚಿತ್ರಗಳನ್ನು ರಚಿಸಿ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ಬರೆದಿದ್ದರು.
ಏಷ್ಯನ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಏಷ್ಯಾ ವಿಭಾಗದ ಮುಖ್ಯಸ್ಥ ಡಾ. ಮನೀಷ್ ವೈಷ್ಣೋಯಿ ಅವರ ಉಪಸ್ಥಿತಿಯಲ್ಲಿ ಈ ಹೈ-ವೋಲ್ಟೇಜ್ ಸಾಧನೆ ನಡೆಯಿತು. 6ನೇ ತರಗತಿಯ ವಿದ್ಯಾರ್ಥಿಗಳಾದ ಬುವಿಕ ಆರ್.ಕೆ, ಅಂಶಿ ಸಂತೋಷ್ ಕುಮಾರ್ ಹಾಗೂ ವಿಷ್ಮಾ ಅಜ್ಜಿಕಲ್ಲು ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿರಂತರ 30 ಗಂಟೆಗಳ ಕಾಲ ಮರಳು ಕಲೆ ಪ್ರದರ್ಶಿಸಿದರು.
ಇದೇ ವೇಳೆ, 3ನೇ ತರಗತಿಯ ವಿದ್ಯಾರ್ಥಿಗಳಾದ ಹಿಮಾಂಶುಕೃಷ್ಣ ಹಾಗೂ ಸೋಹನ್ ಕೆ.ಎಸ್ ಕಣ್ಣು ತೆರೆದೇ ನಿರಂತರ 18 ಗಂಟೆಗಳ ಕಾಲ ಸ್ಯಾಂಡ್ ಆರ್ಟ್ ಪ್ರದರ್ಶನ ನೀಡಿ ವಿಶ್ವದಾಖಲೆಯ ಪುಟಕ್ಕೆ ಸೇರ್ಪಡೆಯಾದರು. ಸಾಧನೆ ಪೂರ್ಣಗೊಳ್ಳುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಅಧಿಕೃತ ಪ್ರಮಾಣಪತ್ರ ಹಸ್ತಾಂತರಿಸಲಾಯಿತು.
ಮಕ್ಕಳ ಈ ಸುದೀರ್ಘ ಸಾಧನೆಯ ಸಂದರ್ಭದಲ್ಲಿ ನಿರಂತರವಾಗಿ ಹಿನ್ನೆಲೆ ಗಾಯನ ಹಾಗೂ ಸಮನ್ವಯತೆಯಿಂದ ಸಾಥ್ ನೀಡಿದ ವರ್ಣಕುಟೀರದ ಸಂಚಾಲಕ ಪ್ರವೀಣ್ ವರ್ಣಕುಟೀರ, ಅಧ್ಯಕ್ಷೆ ಗೀತಾಲಕ್ಷ್ಮೀ ಕೆದಿಮಾರು, ಅನುಷಾ ಅಮ್ಮಣ್ಣಾಯ, ರವಿ ಪುತ್ತೂರು, ಶಿವ ಕುಮಾರ್ ಬೆಟ್ಟಂಪಾಡಿ, ಪ್ರಸನ್ನ ಪಿ, ಗ್ರೀಷ್ಮಾ ಏಕತಡ್ಕ ಮತ್ತು ಗೌತಮ್ ಕೃಷ್ಣ ನೆಕ್ಕರೆ ಅವರಿಗೂ ‘ಉತ್ತಮ ಸಮನ್ವಯಕಾರ’ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೌರವ ಲಭಿಸಿದೆ.









