ಸಮಗ್ರ ನ್ಯೂಸ್: ಮತದಾರರ ಪಟ್ಟಿ ಪರಿಷ್ಟರಣೆ (SIR) ವೇಳೆ ಹೆಸರುಗಳನ್ನು ತೆಗೆದುಹಾಕಲು ನಮೂನೆ-7 (Form 7) ಅರ್ಜಿಗಳನ್ನು ಸಲ್ಲಿಸುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ವಿ. ಅನ್ಬುಕುಮಾರ್, ಸುಳ್ಳು ಅರ್ಜಿ ಅಥವಾ ಮಾಹಿತಿ ನೀಡುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ಮತದಾರರ ನೋಂದಣಾಧಿಕಾರಿಗಳಿಗೆ (ERO) ಖಡಕ್ ಸೂಚನೆ ನೀಡಿದ್ದಾರೆ.
ಫಾರಂ-7 ದುರ್ಬಳಕೆ ಆರೋಪ ಸಂಬಂಧ ಚುನಾವಣಾ ಆಯೋಗದ ಕಚೇರಿ ಮುಂದೆ ಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವರ ಧರಣಿ ನಡೆಸಿದ ಬೆನ್ನಲ್ಲೇ, ಕಾನೂನು ಪ್ರಕಾರ ಕ್ರಮಕೈಗೊಳ್ಳುವಂತೆ EROಗಳಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಸೂಚನೆ ನೀಡಿದ್ದಾರೆ.
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ (ಫಾರ್ಮ್ 6/6A), ಹೆಸರು ಅಳಿಸುವಿಕೆ (ಫಾರ್ಮ್ 7) ಹಾಗೂ ತಿದ್ದುಪಡಿಗಳಿಗೆ (ಫಾರ್ಮ್ 8) ಸಂಬಂಧಿಸಿದಂತೆ ನಕಲಿ ಹಾಗೂ ಸುಳ್ಳು ಮಾಹಿತಿ ನೀಡುತ್ತಿರುವ ದೂರುಗಳು ಕಚೇರಿಗೆ ಬಂದ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ದೇಶನ ಹೊರಡಿಸಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಬಿಬಿಎಂಪಿ ಚುನಾವಣಾ ಆಯುಕ್ತರು ಹಾಗೂ 224 ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳಿಗೆ (ERO) ಈ ಕೆಳಗಿನ ಪ್ರಮುಖ ನಿರ್ದೇಶನಗಳನ್ನು ನೀಡಲಾಗಿದೆ.
ಅರ್ಜಿ ಅಥವಾ ಫಾರ್ಮ್‌ನಲ್ಲಿ ತಿಳಿದೂ ಸುಳ್ಳು ಹೇಳಿಕೆ ಅಥವಾ ತಪ್ಪು ಮಾಹಿತಿ ನೀಡಿರುವುದು ಕಂಡುಬಂದರೆ, ಅಂತಹ ಅರ್ಜಿದಾರರ ವಿರುದ್ಧ ‘ಜನಪ್ರತಿನಿಧಿ ಕಾಯ್ದೆ 1950’ರ ಸೆಕ್ಷನ್ 31ರ ನಿಬಂಧನೆಗಳ ಪ್ರಕಾರ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು.
ಕಾನೂನು ಕ್ರಮ ಜರುಗಿಸುವ ಮೊದಲು ‘ಮತದಾರರ ನೋಂದಣಿ ನಿಯಮಗಳು 1960’ರ ರೂಲ್ 20ರ ಅಡಿಯಲ್ಲಿ ಸೂಕ್ತ ತನಿಖೆ/ವಿಚಾರಣೆ ನಡೆಸುವುದು ಕಡ್ಡಾಯವಾಗಿದೆ.
ಅಕ್ರಮ ಅಥವಾ ನಕಲಿ ಅರ್ಜಿಗಳ ಮೂಲಕ ಮತದಾರರ ಪಟ್ಟಿಯಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುವವರ ವಿರುದ್ಧ ಚುನಾವಣಾ ಆಯೋಗವು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಅಧಿಕಾರಿಗಳು ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.









