ಸಮಗ್ರ ನ್ಯೂಸ್: ರಾಜಕೀಯದವರ ಭಾಷಣ ಕೇಳಿ ಯಾವುದೇ ಮನೆ, ಕುಟಂಬದ ಉದ್ಧಾರವಾಗಿಲ್ಲ. ನಿಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಉದ್ಯೋಗ ಕೊಡಿಸಿ ಬಳಿಕ ನಿಮ್ಮ ಆರೋಗ್ಯದ ಕಡೆಯೂ ಹೆಚ್ಚಿನ ಗಮನ ಹರಿಸಿದರೆ ಮಾತ್ರ ನಿಮ್ಮ ಕುಟುಂಬ ಉದ್ಧಾರವಾಗಲು ಸಾಧ್ಯ ಎಂದು ಶಾಸಕ ಅಶೋಕ್ ರೈ ಹೇಳಿದರು.
ಪುತ್ತೂರು ತಾಲ್ಲೂಕಿನ ಕುರಿಯ ಗ್ರಾಮದಲ್ಲಿ ₹65 ಲಕ್ಷ ವೆಚ್ಚದ ಆರೋಗ್ಯ ಕ್ಷೇಮ ಕೇಂದ್ರ ಹಾಗೂ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯ ಎಲ್ಲ ಮಠಗಳಿಗೂ ಒಂದೊಂದು ಕೋಟಿ ಅನುದಾನ ನೀಡಿದ್ದೇವೆ. ಮಸೀದಿ, ಚರ್ಚ್‌ಗೂ ನೀಡುತ್ತೇವೆ. ಆದರೆ, ಇಷ್ಟು ವರ್ಷದಲ್ಲಿ ಬಿಜೆಪಿಯವರು ಮಠದ ಸ್ವಾಮೀಜಿಗಳನ್ನು ಅವರ ರಾಜಕೀಯಕ್ಕೆ ಬಳಸಿದ್ದಾರೆಯೇ ವಿನಾ ಅವರಿಗೆ ನಯಾ ಪೈಸೆ ಕೊಟ್ಟಿಲ್ಲ . ಚುನಾವಣೆ ಬಂದಾಗ ಹಿಂದುತ್ವದ ಹೆಸರಿನಲ್ಲಿ ಜನರನ್ನು ವಿಭಜಿಸಿ ಮತ ಕೇಳುವ ಬಿಜೆಪಿಯವರು ಹಿಂದೂ ಧರ್ಮಕ್ಕೆ ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಸೂರ್ಯನಾರಾಯಣ ಭಟ್ ದೇವರಗುಂಡಿ ಮಾತನಾಡಿ, ಪುತ್ತೂರಿಗೆ ಮೆಡಿಕಲ್ ಕಾಲೇಜು ತರಲು ಯಾವ ರಾಜಕಾರಣಿಯಿಂದಲೂ ಸಾಧ್ಯವಾಗಿಲ್ಲ. ಶಾಸಕ ಅಶೋಕ್ ರೈ ಅವರು ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿ ಅವರ ಶಕ್ತಿ ಏನೆಂಬುದನ್ನು ತೋರಿಸಿದ್ದಾರೆ. ಇವರಂಥ ಶಾಸಕರು ನಮ್ಮಲ್ಲಿರಬೇಕು. ಇವರೇ ಪುತ್ತೂರಲ್ಲಿ ಹಲವು ವರ್ಷ ಶಾಸಕರಾಗಿರಬೇಕು ಎಂಬುದು ನಮ್ಮ ಆಶಯವಾಗಿದ್ದು, ಪಕ್ಷ ನೋಡದೆ ಅವರಿಗೆ ಬೆಂಬಲ ನೀಡಬೇಕು ಎಂದರು.









