ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿರುವ 1 ಕಟ್ಟಡ ಸೇರಿದಂತೆ ಕೆಲವು ಜಾಗಗಳಿಗೆ ಸಂಬಂಧಿಸಿದ ವಿಚಾರಕ್ಕೆ ಹೊಸ ತಿರುವು ದೊರೆತಿದೆ. ಅಲ್ಲಿರುವ ಕಟ್ಟಡ ಹಾಗೂ ಅಂಗಡಿಗಳ ತೆರವು ಕಾರ್ಯ ಆರಂಭವಾಗಿದೆ.
ಶ್ರೀನಿಕೇತನ ಕಟ್ಟಡದಲ್ಲಿರುವ ವಸತಿ ಕೊಠಡಿಗಳು, ಹೊಟೇಲ್, ಫ್ಯಾನ್ಸಿ ಸೇರಿದಂತೆ ವಿವಿಧ ಅಂಗಡಿಗಳನ್ನು ತೆರವುಗೊಳಿಸಲು ಸೆ.30ರವರೆಗೆ ಗಡುವು ನೀಡಿದ್ದು ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೆಲವು ಅಂಗಡಿ ಮಾಲಕರು ತಮ್ಮ ಅಂಗಡಿಗಳಲ್ಲಿದ್ದ ಸಾಮಗ್ರಿಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ.
ಕುಮಾರಧಾರೆಯಿಂದ ಮುಖ್ಯರಸ್ತೆ ಬದಿಯಲ್ಲಿರುವ ವಿವಾದಿತ ಜಾಗಗಳು ಹಾಗೂ ಆದಿ ಸುಬ್ರಹ್ಮಣ್ಯ ರಸ್ತೆಯ ಬದಿಯಲ್ಲಿರುವ ವಿವಾದಿತ ಕಟ್ಟಡಗಳನ್ನು ತೆರವುಗೊಳಿಸುವಂತೆ ಶ್ರೀ ದೇಗುಲದ ವತಿಯಿಂದ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಕೆಲವು ಅಂಗಡಿ ಮಾಲಕರು ಸ್ವಯಂಪ್ರೇರಿತರಾಗಿ ಕಟ್ಟಡ ಹಾಗೂ ಸಾಮಗ್ರಿಗಳನ್ನು ತೆರವುಗೊಳಿಸಲು ಆರಂಭಿಸಿದ್ದಾರೆ.
ಸ್ಕಂದ ಲಾಡ್ಜ್ ಕಟ್ಟಡವೂ ತೆರವು
ಇದೇ ವೇಳೆ, ದೇವಾಲಯಕ್ಕೆ ಸೇರಿದ ರಥಬೀದಿಯಲ್ಲಿರುವ ಸ್ಕಂದ ಲಾಡ್ಜ್ ಕಟ್ಟಡವನ್ನು ತೆರವುಗೊಳಿಸುವ ಕ್ರಮವೂ ನಡೆಯುತ್ತಿದೆ. ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು, ಅಪಾಯದಂಚಿನಲ್ಲಿದೆ. ಅಲ್ಲದೆ, ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಕಟ್ಟಡವನ್ನು ತೆರವುಗೊಳಿಸಲಾಗುತ್ತಿದೆ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ತಿಳಿಸಿದ್ದಾರೆ.









