ಸಮಗ್ರ ನ್ಯೂಸ್: ಈ ಸಲ ಭೂಮಿ ಸೂಪರ್ ಎಲ್ ನಿನೋ ಸ್ಥಿತಿಯಿಂದ ಕುದಿಯಲಿದೆ. ಎಲ್ ನಿನೋ ಹವಾಮಾನ ಪರಿಸ್ಥಿತಿಯು ಶಾಖದ ಪ್ರಮಾಣವನ್ನ ಮಿತಿಮೀರಿ ಹೆಚ್ಚಿಸಲಿದೆ ಎಂದು ಈಗಾಗಲೇ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅದಕ್ಕಿಂತಲೂ ಭಯಾನಕ ಎಂದರೆ, 2027ರ ಫೆಬ್ರವರಿ ಒಳಗೆ ಸೂಪರ್ ಎಲ್ ನಿನೋ ಪರಿಸ್ಥಿತಿಯ ಕಾರಣಕ್ಕೆ ಸುಮಾರು 4,50,000 ಜನರು ಪ್ರಾಣವನ್ನೇ ಕಳೆದುಕೊಳ್ಳಬಹುದು ಎಂದು ಹವಾಮಾನ ವಿಜ್ಞಾನಿಗಳು ಹೇಳಿದ್ದಾರೆ.
ಅಂದರೆ, ಎಲ್ ನಿನೋ ವಿಪರೀತ ಎನ್ನಿಸುವಷ್ಟು ಶಾಖವನ್ನ ಸೃಷ್ಟಿ ಮಾಡಲಿದ್ದು, ಇದರ ಹೊಡೆತಕ್ಕೆ ಜನರ ಜೀವವೇ ಹೋಗಲಿದೆ. ಭಾರತಕ್ಕೂ ಎಲ್ ನಿನೋ ಬಾಧಿಸದೆ ಇರೋದಿಲ್ಲ ಎಂದೂ ಹವಾಮಾನ ಇಲಾಖೆ ತಜ್ಞರು ಮಾಹಿತಿ ನೀಡಿದ್ದಾರೆ.
ಹವಾಮಾನ ಪರಿಸ್ಥಿತಿ ಹದಗೆಡುತ್ತಿದೆ. ಈಗಾಗಲೇ ವಿಶ್ವದ ಹಲವು ಭಾಗಗಳಲ್ಲಿ ತಾಪಮಾನ ಏರಿಕೆಯಾಗಿದೆ. ಬೇರೆಲ್ಲೂ ಬೇಡ, ಕರ್ನಾಟಕದಲ್ಲೇ ನೀವು ಗಮನಿಸಿ. ಮಳೆಗಾಲ ಮುಗಿಯುತ್ತಿದ್ದಂತೆ ಚಳಿಗಾಲ ಶುರುವಾಗಬೇಕಿತ್ತು. ಆದರೆ ಈ ಸಲ ಈಗಲೇ ಸೆಖೆಯ ಪ್ರಮಾಣ ಹೆಚ್ಚಾಗಿದೆ. ಈಗಾಗಲೆ ವಿಶ್ವದ ಹಲವು ದೇಶಗಳಲ್ಲಿ ಏರಿಕೆಯಾಗಿರುವ ತಾಪಮಾನದ ಪರಿಣಾಮವಾಗಿ ಸಂಭವಿಸುವ ಅಕಾಲಿಕ ಸಾವುಗಳ ಜೊತೆಗೆ, ಈ ಹೆಚ್ಚುವರಿ ಸಾವುಗಳೂ ಸಂಭವಿಸಲಿವೆ. ಇಂಡೋನೇಷ್ಯಾದಿಂದ ಭಾರತದವರೆಗೆ ಹಾಗೂ ನೈಜೀರಿಯಾದಿಂದ ಅಮೆರಿಕದವರೆಗೆ ಪ್ರಪಂಚದಾದ್ಯಂತ ಇದರ ಪರಿಣಾಮ ಉಂಟಾಗಲಿದೆ. ‘ಎಲ್ ನಿನೋ’ (El Niño) ವಿದ್ಯಮಾನವು ತರುವ ಬರಗಾಲ, ಕಾಡ್ಗಿಚ್ಚು ಮತ್ತು ಪ್ರವಾಹಗಳಿಂದಾಗಿ ಇನ್ನೂ ಹೆಚ್ಚಿನ ಸಾವುಗಳು ಸಂಭವಿಸುವ ನಿರೀಕ್ಷೆಯಿದೆ.
ಪ್ರಾದೇಶಿಕ ಮಟ್ಟದಲ್ಲಿ ಅತಿಯಾದ ಉಷ್ಣತೆಯಿಂದ ಸಂಭವಿಸುವ ಸಾವುಗಳ ಅಂದಾಜನ್ನು ಮಾಡಲಾಗಿದೆ; ಜನರ ರಕ್ಷಣೆಗಾಗಿ ಹಾಗೂ ಜೀವ ಉಳಿಸಲು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಈ ಮುನ್ಸೂಚನೆಗಳು ಗುರುತಿಸಿವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇಂತಹ ಕ್ರಮಗಳಲ್ಲಿ ಉತ್ತಮ ಉಷ್ಣತಾ ಮುನ್ಸೂಚನೆಗಳು, ಜನರು ಆಶ್ರಯ ಪಡೆಯಬಹುದಾದ ಶೀತಲೀಕರಣ ಕೇಂದ್ರಗಳು (ಕೂಲಿಂಗ್ ಸೆಂಟರ್ಗಳು), ಅತಿಯಾದ ಉಷ್ಣತೆಯ ಸಮಯದಲ್ಲಿ ವೈದ್ಯಕೀಯ ಸೌಲಭ್ಯಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮತ್ತು ಹೊರಾಂಗಣದಲ್ಲಿ ಕೆಲಸ ಮಾಡುವವರಿಗೆ ರಕ್ಷಣಾ ಕ್ರಮಗಳು ಸೇರಿವೆ.
ಸೂಪರ್ ಎಲ್ ನಿನೋದಿಂದ ಉಂಟಾಗುವ ಶಾಖದ ಪ್ರಮಾಣದಿಂದ ಯಾವ ದೇಶಗಳಲ್ಲಿ ಎಷ್ಟು ಜನರು ಸಾಯಬಹುದು ಎಂಬುದರ ಪಟ್ಟಿಯನ್ನ ಹವಾಮಾನ ಇಲಾಖೆ ಮಾಡಿದೆ. ಅದರ ಅನ್ವಯ 2026ರ ಸೆಪ್ಟೆಂಬರ್ನಿಂದ 2027ರ ಅಕ್ಟೋಬರ್ವರೆಗೆ ನೈಜೀರಿಯಾದಲ್ಲಿ ಅತಿ ಹೆಚ್ಚು ಅಂದರೆ 31,320 ಮಂದಿ ಸಾವನ್ನಪ್ಪಬಹುದು. ಎರಡನೇ ಸ್ಥಾನದಲ್ಲಿ ಇಂಡೋನೇಷ್ಯಾ ಇದೆ. ಇಲ್ಲಿ ಶಾಖದ ಹೊಡೆತಕ್ಕೆ 19,251 ಮಂದಿ, ಸೂಡಾನ್ನಲ್ಲಿ 17,430 ಮಂದಿ ಮತ್ತು ಭಾರತದಲ್ಲಿ ಅಂದಾಜು 15,670 ಮಂದಿಯ ಸಾವಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಅಲ್ಲಿನ ಸರ್ಕಾರಗಳು ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳಬೇಕು ಎಂಬುದನ್ನ ವರದಿ ಸೂಚಿಸುತ್ತದೆ.
ಎಲ್ ನಿನೋ ಈಗಾಗಲೇ ಭೂಮಿಯನ್ನ ಬಿಸಿ ಮಾಡುತ್ತಿದೆ. ಈ ಹಿಂದೆ ಎಲ್ ನಿನೋ ಉಂಟಾಗಿದ್ದಾಗ ಆಗಿದ್ದ ಶಾಖಕ್ಕಿಂತಲೂ ಈಗ ಮತ್ತಷ್ಟು ಶಾಖ ಹೆಚ್ಚಾಗಲಿದೆ ಎಂದು ವಿಜ್ಞಾನಿಗಳು ಸೂಚಿಸಿದ್ದಾರೆ. ಭಾರತದಲ್ಲಿ ಮುಂಗಾರು ಮಳೆ ಕಡಿಮೆಯಾಗಲೂ ಈ ಎಲ್ ನಿನೋ ಕಾರಣವಾಗಿದೆ.
ಎಲ್ ನಿನೋ ಎಂದರೆ ಸ್ಪ್ಯಾನಿಷ್ ಭಾಷೆಯಲ್ಲಿ ಅರ್ಥ ‘ದಿ ಕ್ರೈಸ್ಟ್ ಚೈಲ್ಡ್’. ಫೆಸಿಫಿಕ್ ಮಹಾಸಾಗರದಲ್ಲಿ ಉಂಟಾಗುವ ಒಂದು ನೈಸರ್ಗಿಕ ಹವಾಮಾನ ಪರಿಸ್ಥಿತಿ. ಎಲ್ ನಿನೋ ಜಾಗತಿಕವಾಗಿ ತಾಪಮಾನವನ್ನ ಹೆಚ್ಚಿಸುವ ಜೊತೆಗೆ, ಪ್ರಪಂಚಾದ್ಯಂತ ಮಳೆ ಪ್ರಮಾಣವನ್ನ ಕುಂಠಿತಗೊಳಿಸುತ್ತದೆ.
ಮಧ್ಯ ಮತ್ತು ಪೂರ್ವ ಉಷ್ಣವಲಯದ ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರದ ಮೇಲ್ಮೈಯಲ್ಲಿನ ತಾಪಮಾನ ಹೆಚ್ಚಾಗುವುದು ಅಥವಾ ಸಮುದ್ರ ಮೇಲ್ಮೈ ತಾಪಮಾನ ಸರಾಸರಿಗಿಂತ ಅಧಿಕವಾಗುವುದೇ ಎಲ್ ನಿನೋ ಸ್ಥಿತಿ. ಹೀಗಾದಾಗ ಸಾಮಾನ್ಯವಾಗಿ ಸಮಭಾಜಕದ ಉದ್ದಕ್ಕೂ ಪೂರ್ವದಿಂದ ಪಶ್ಚಿಮಕ್ಕೆ ಬೀಸುವ (“ಪೂರ್ವ ಮಾರುತಗಳು”) ಕಡಿಮೆ ಮಟ್ಟದ ಮೇಲ್ಮೈ ಮಾರುತಗಳು ದುರ್ಬಲಗೊಳ್ಳುತ್ತವೆ ಅಥವಾ ಕೆಲವು ಸಂದರ್ಭಗಳಲ್ಲಿ, ಇನ್ನೊಂದು ದಿಕ್ಕಿನಲ್ಲಿ ಬೀಸಲಾರಂಭಿಸುತ್ತವೆ (ಪಶ್ಚಿಮದಿಂದ ಪೂರ್ವಕ್ಕೆ ಅಥವಾ “ಪಶ್ಚಿಮ ಮಾರುತಗಳು”). ಇದು ಭಾರತ, ಆಸ್ಟ್ರೇಲಿಯಾ ಮತ್ತಿತರ ದೇಶಗಳಲ್ಲಿ ಬರಗಾಲ ಪರಿಸ್ಥಿತಿ ತಂದರೆ, ಪೆರು, ಅಮೆರಿಕದ ದಕ್ಷಿಣ ಭಾಗ ಮತ್ತಿತರ ಕಡೆಗಳಲ್ಲಿ ತೀವ್ರ ಮಳೆಯನ್ನ ತರುತ್ತದೆ. ಪ್ರವಾಹ ಪರಿಸ್ಥಿತಿಯನ್ನೂ ಉಂಟು ಮಾಡಬಹುದು. ಒಟ್ಟಿನಲ್ಲಿ ಎಲ್ ನಿನೋ ಎಂಬುದು ಹವಾಮಾನ ವೈಪರೀತ್ಯವಾಗಿದೆ. ಇನ್ನು ಎಲ್ ನಿನೋ ಪ್ರತಿವರ್ಷವೂ ಉಂಟಾಗೋದಿಲ್ಲ. 2-7 ವರ್ಷಗಳಿಗೊಮ್ಮೆ ಸಂಭವಿಸಬಹುದು.









