ಮಂಗಳೂರು: ಶೈಕ್ಷಣಿಕ ಜಿಲ್ಲೆಯಲ್ಲೇ 34 ಶಾಲೆಗಳಲ್ಲಿ ಶೂನ್ಯ ದಾಖಲಾತಿ| ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳು ಬಂದ್

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳು, ಪಿಎಂಶ್ರೀ ಶಾಲೆಗಳಲ್ಲಿ ಮಕ್ಕಳ ಪ್ರವೇಶಕ್ಕಾಗಿ ಪಾಲಕರು ಪೈಪೋಟಿ ನಡೆಸುತ್ತಾರೆ. ಇನ್ನೊಂದೆಡೆ, ಸರ್ಕಾರಿ ಪ್ರಾಥಮಿಕ ಶಾಲೆಗಳು ಅದರಲ್ಲೂ ಕಿರಿಯ ಪ್ರಾಥಮಿಕ ಶಾಲೆಗಳು ಸೊರಗುತ್ತಿವೆ.

Ad Widget ... .. Ad Widget .

ಪ್ರಸಕ್ತ ಸಾಲಿನಲ್ಲಿ 23 ಸರ್ಕಾರಿ ಶಾಲೆಗಳು, ಆರು ಅನುದಾನಿತ ಶಾಲೆಗಳು ಹಾಗೂ ಐದು ಅನುದಾನರಹಿತ ಶಾಲೆಗಳು ಸೇರಿದಂತೆ ಒಟ್ಟು 34 ಶಾಲೆಗಳಲ್ಲಿ ಒಂದನೇ ತರಗತಿಗೆ ಮಕ್ಕಳ ದಾಖಲಾತಿಯಾಗಿಲ್ಲ.

Ad Widget

ಶೂನ್ಯ ದಾಖಲಾತಿ ಆಗಿರುವ ಸರ್ಕಾರಿ ಶಾಲೆಗಳಲ್ಲಿ ಎಲ್ಲವೂ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳೇ ಆಗಿವೆ. ಯಾವುದೇ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಸಮಸ್ಯೆ ಎದುರಾಗಿಲ್ಲ. ಒಂದು ಖಾಸಗಿ ಹಾಗೂ ಒಂದು ಅನುದಾನಿತ ಪ್ರೌಢಶಾಲೆ ಎಂಟನೇ ತರಗತಿಗೆ ವಿದ್ಯಾರ್ಥಿಗಳ ಕೊರತೆ ಎದುರಿಸಿವೆ.

ಸುಳ್ಯ ತಾಲ್ಲೂಕು ಒಂದರಲ್ಲೇ ಪೆತ್ತಾಜೆ, ಕಲ್ಪತಬೈಲ್, ಅಚ್ರಪ್ಪಾಡಿ, ಮುತ್ಲಾಜೆ, ಪೈಕ, ಹಾಡಿಕಲ್ಲು, ಕೋಟೆಗುಡ್ಡೆ, ಕಮಿಲ ಸೇರಿದಂತೆ ಎಂಟು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಗೆ ಶೂನ್ಯ ದಾಖಲಾತಿಯಾಗಿದೆ. ಮಂಗಳೂರು ಉತ್ತರ ಬ್ಲಾಕ್‌ನಲ್ಲಿ ಮೆಲ್ಕಾರ್, ಅತಿಕಾರಿಬೆಟ್ಟು, ಕಿಲ್ಪಾಡಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಉಳ್ಳಂಜೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಒಂದನೇ ತರಗತಿಗೆ ವಿದ್ಯಾರ್ಥಿಗಳಿಲ್ಲದೆ ಸೊರಗಿದೆ.

ಶೂನ್ಯ ದಾಖಲಾತಿ ಆಗಿರುವ ಅನುದಾನಿತ ಶಾಲೆಗಳಲ್ಲಿ ಮಂಗಳೂರು ದಕ್ಷಿಣ ಬ್ಲಾಕ್‌ನಲ್ಲಿರುವ ಕಂಕನಾಡಿಯ ಕಪಿತಾನಿಯೊ ಹಿರಿಯ ಪ್ರಾಥಮಿಕ ಶಾಲೆ, ಕಪಿತಾನಿಯೊ ಪ್ರೌಢಶಾಲೆ, ಪನೀರ್ ಹಿರಿಯ ಪ್ರಾಥಮಿಕ ಶಾಲೆ, ಮೂಡುಬಿದಿರೆಯ ಆನೆಗುಡ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪಾಲಡ್ಕದ ಸೇಂಟ್ ಇಗ್ನೇಷಿಯಸ್ ಹಿರಿಯ ಪ್ರಾಥಮಿಕ ಶಾಲೆ, ನಿಡ್ಡೋಡಿಯ ಶ್ರೀ ಸತ್ಯನಾರಾಯಣ ಹಿರಿಯ ಪ್ರಾಥಮಿಕ ಶಾಲೆಗಳು ಒಳಗೊಂಡಿವೆ.

ಶೂನ್ಯ ದಾಖಲಾತಿ ಆಗಿರುವ ಸರ್ಕಾರಿ ಶಾಲೆಗಳಲ್ಲಿ ಎಲ್ಲವೂ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳೇ ಆಗಿವೆ. ಯಾವುದೇ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಸಮಸ್ಯೆ ಎದುರಾಗಿಲ್ಲ. ಒಂದು ಖಾಸಗಿ ಹಾಗೂ ಒಂದು ಅನುದಾನಿತ ಪ್ರೌಢಶಾಲೆ ಎಂಟನೇ ತರಗತಿಗೆ ವಿದ್ಯಾರ್ಥಿಗಳ ಕೊರತೆ ಎದುರಿಸಿವೆ.

ಅನುದಾನರಹಿತ ಶಾಲೆಗಳಲ್ಲಿ ಬೆಳ್ತಂಗಡಿ ಪಿಲ್ಯದ ಗುಡ್ ಫ್ಯೂಚರ್ ಚೈಲ್ಡ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಮಂಗಳೂರು ದಕ್ಷಿಣದಲ್ಲಿರುವ ಕೊಳಂಬೆ ಪನಾ ಗ್ಲೋಬಲ್ ಸ್ಕೂಲ್, ಮೂಡುಬಿದಿರೆ ನಿಡ್ಡೋಡಿಯ ಎಸ್.ಎನ್. ಪಬ್ಲಿಕ್ ಸ್ಕೂಲ್, ಪುತ್ತೂರು ಸರ್ಯದ ಲಕ್ಷ್ಮಿ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆ, ನೆಟ್ಟಣದ ಮೌಂಟ್ ಸಿಯಾನ್ ಪಬ್ಲಿಕ್ ಸ್ಕೂಲ್‌ಗಳಲ್ಲಿ 2025-26ನೇ ಸಾಲಿನಲ್ಲಿ ಒಂದನೇ ತರಗತಿಗೆ ಶೂನ್ಯ ದಾಖಲಾತಿಯಾಗಿದೆ.

2025-26ನೇ ಸಾಲಿನಲ್ಲಿ ಎಂಟು ಸರ್ಕಾರಿ ಶಾಲೆಗಳು, 10 ಅನುದಾನಿತ ಶಾಲೆಗಳು ಹಾಗೂ ಎರಡು ಅನುದಾನಿತ ಶಾಲೆಗಳು ಶೂನ್ಯ ದಾಖಲಾತಿ ಪಟ್ಟಿಗೆ ಸೇರಿದ್ದವು. 2024-25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 14 ಶಾಲೆಗಳಲ್ಲಿ ಒಂದನೇ ತರಗತಿಗೆ ವಿದ್ಯಾರ್ಥಿಗಳ ನೋಂದಣಿ ಶೂನ್ಯವಾಗಿತ್ತು.

‘ಇತ್ತೀಚಿನ ವರ್ಷಗಳಲ್ಲಿ ಪಾಲಕರು ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಮಕ್ಕಳನ್ನು ಸೇರಿಸಲು ಒಲವು ತೋರುತ್ತಾರೆ. ಈ ಬಾರಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಅನುಷ್ಠಾನಗೊಂಡಿದ್ದು, ಮುಂದಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಒಟ್ಟಾರೆಯಾಗಿ ಶೈಕ್ಷಣಿಕವಾಗಿ ಮುಂದುವರಿದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಉತ್ತಮ‌ ಸೌಲಭ್ಯಗಳನ್ನು ಹೊಂದಿದ್ದರೂ ಪಾಲಕರು ತಮ್ಮ‌ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಾತಿ ಮಾಡದಿರುವುದು ದುರದೃಷ್ಟಕರ.

(ಕೃಪೆ: ಈ ಸುದ್ದಿಯನ್ನು ‘ಪ್ರಜಾವಾಣಿ’ ದೈನಿಕದಿಂದ ಆಯ್ದು‌‌ ಮಾರ್ಪಡಿಸಿಕೊಂಡು ತಯಾರಿಸಲಾಗಿದೆ.)

Leave a Comment

Your email address will not be published. Required fields are marked *