ಸಮಗ್ರ ನ್ಯೂಸ್: ಉದ್ಯೋಗಕ್ಕಾಗಿ ನೇಪಾಳದಲ್ಲಿ ನೆಲೆಸಿದ್ದ ಕರ್ನಾಟಕದ ಬೆಳಗಾವಿ ಮೂಲದ 25 ವರ್ಷದ ಯುವಕನೊಬ್ಬನನ್ನು ತನ್ನ ರೂಂಮೇಟ್ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ.
ಕೊಲೆಯಾಗಿರುವ ಯುವಕ ಭಾರತೀಯ ಮೂಲದವನಾಗಿದ್ದು, ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರ ನಿವಾಸಿ 25 ವರ್ಷದ ಸಾಹಿಲ್ ರಿಯಾಜ್ ಅಹ್ಮದ್ ಮೋಮಿನ್ ಎಂದು ಗುರುತಿಸಲಾಗಿದೆ. ಈತ ನೇಪಾಳದ ಹೋಟೆಲ್ವೊಂದರಲ್ಲಿ ಕೆಲಸ ಮಾಡಲೆಂದು ಅಲ್ಲಿಗೆ ಕೇವಲ 25 ದಿನಗಳ ಹಿಂದೆಯೇ ತೆರಳಿದ್ದಾನೆ ಎಂದು ತಿಳಿದುಬಂದಿದೆ.
ಸಾಹಿಲ್ ಸುಮಾರು 25 ದಿನಗಳ ಹಿಂದೆ ನೇಪಾಳದ ಝಾಪಾ ಜಿಲ್ಲೆಯಲ್ಲಿರುವ ಡಮಾಕ್ನಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಕೆಲಸ ತೆರಳಿದ್ದು, ಇದಕ್ಕೂ ಮುನ್ನ ದುಬೈ ಮತ್ತು ಥೈಲ್ಯಾಂಡ್ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ನೇಪಾಳದಲ್ಲಿ ಕೆಲಸ ಸಿಕ್ಕ ಬಳಿಕ ಅಲ್ಲಿಗೆ ಹೋಗಿದ್ದು, ಸದ್ದಾಂ ಹುಸೇನ್ ಎಂಬ ವ್ಯಕ್ತಿಯ ಜೊತೆಗೆ ರೂಂ ಶೇರ್ ಮಾಡಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.
ಹೀಗೆ ಕೋಣೆಯಲ್ಲಿ ಇಬ್ಬರೇ ವಾಸವಿದ್ದು, ಇತ್ತೀಚೆಗೆ ಸಾಹಿಲ್ ಬೆಳಗಾವಿಯ ತನ್ನ ಸ್ನೇಹಿತನನ್ನು ಹೋಟೆಲ್ಗೆ ಕೆಲಸಕ್ಕೆ ಬರುವಂತೆ ಆಹ್ವಾನಿಸಿದ್ದಾನೆ. ಅಲ್ಲಿಗೆ ಹೋಗಿದ್ದ ಸ್ನೇಹಿತ ಈ ಘಟನೆಗೂ ಹಿಂದಿನ ದಿನ ರಾತ್ರಿ ಅದೇ ಕೋಣೆಯಲ್ಲಿ ತಂಗಿದ್ದು, ಈ ವೇಳೆ, ಸಾಹಿಲ್ ಮತ್ತು ಸದ್ದಾಂ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಮತ್ತೋರ್ವ ಸ್ನೇಹಿತ ಇಬ್ಬರ ನಡುವೆ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಜಗಳ ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆದಿದ್ದಾನೆ.
ಆದರೆ, ಸದ್ದಾಂ ಹುಸೇನ್ ಮಾತ್ರ ಇನ್ನೂ ಕುಪಿತನಾಗಿದ್ದು, ಅದೇ ದಿನ ಮುಂಜಾನೆ ಸುಮಾರಿಗೆ ಸಾಹೀಲ್ ಹಾಗೂ ಆತನ ಸ್ನೇಹಿತ ಪೂರ್ತಿಯಾಗಿ ನಿದ್ರೆಗೆ ಜಾರಿದ್ದನ್ನೇ ಅವಕಾಶವನ್ನಾಗಿ ಮಾಡಿಕೊಂಡಿದ್ದು, ಸಾಹಿಲ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಮನಸೋ ಇಚ್ಛೆ ಇರಿದಿದ್ದಾನೆ. ಈ ವೇಳೆ ಸಹಾಯಕ್ಕಾಗಿ ಸಾಹೀಲ್ ಕೂಗಿದ್ದು, ಆತನ ಸ್ನೇಹಿತ ಇದನ್ನು ತಡೆಯಲು ಪ್ರಯತ್ನಿಸಿದಾಗ್ಯೂ, ಅದು ನಡೆಯಲಿಲ್ಲ. ಹೀಗೆ ಬರ್ಬರವಾಗಿ ಇರಿದ ಬಳಿಕ ಆರೋಪಿ ಸದ್ದಾಂ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ತಕ್ಷಣವೇ ಗಂಭೀರ ಗಾಯಗಳೊಂದಿಗೆ ರಕ್ತದ ಮಡುವಿನಿಲ್ಲದ್ದ ಸಾಹೀಲ್ನನ್ನು ಆತನ ಸ್ನೇಹಿತನ ಸಹಾಯದಿಂದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ, ಫಲಕಾರಿಯಾಗದೆ, ಆತ ಸಾವನ್ನಪ್ಪಿದ್ದಾನೆ. ಸದ್ಯ, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ಸ್ಥಳೀಯ ಪೊಲೀಸರು ತನಿಖೆ ಶುರುಮಾಡಿದ್ದಾರೆ.








