ಸಮಗ್ರ ನ್ಯೂಸ್: : ಅಯೋಧ್ಯೆಯ (Ayodhya) ಶ್ರೀರಾಮ ಮಂದಿರಕ್ಕೆ (Ram mandir) ಭಕ್ತರು ನೀಡಿದ ದೇಣಿಗೆ ಹಣ ದುರುಪಯೋಗ ಮತ್ತು ಕಳ್ಳತನವಾಗಿರುವ ಪ್ರಕರಣದ ತನಿಖೆ ಈಗ ಮತ್ತಷ್ಟು ತೀವ್ರಗೊಂಡಿದೆ. ಈ ಕುರಿತು ವಿಶೇಷ ತನಿಖಾ ತಂಡ (SIT) ಸಲ್ಲಿಸಿರುವ ಪ್ರಾಥಮಿಕ ವರದಿಯು ಆಘಾತಕಾರಿ ಅಂಶಗಳನ್ನು ಹೊರಹಾಕಿದ್ದು, ಮಂದಿರದ ದೇಣಿಗೆ ಹಣವನ್ನು ವ್ಯವಸ್ಥಿತವಾಗಿ ಮತ್ತು ದೀರ್ಘಕಾಲದವರೆಗೆ ಕದಿಯಲಾಗುತ್ತಿತ್ತು ಎಂಬುದು ಪತ್ತೆಯಾಗಿದೆ.
ಇದು ಒಂದೆರಡು ಬಾರಿ ನಡೆದ ಘಟನೆಯಲ್ಲ, ಬದಲಿಗೆ ಕೇವಲ 45 ದಿನಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕನಿಷ್ಠ 70 ಬಾರಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಗಂಭೀರ ಬೆಳವಣಿಗೆಗಳ ಬೆನ್ನಲ್ಲೇ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಡಾ. ಅನಿಲ್ ಮಿಶ್ರಾ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ.
ಎಸ್‌ಐಟಿ ವರದಿಯ ಪ್ರಕಾರ, ದೇಣಿಗೆ ಎಣಿಕೆ ಕೊಠಡಿಯಲ್ಲಿ ಭದ್ರತಾ ತಪಾಸಣೆ ಮತ್ತು ನಗದು ಚಲನವಲನದ ಮೇಲಿನ ನಿಗಾ ಅತ್ಯಂತ ದುರ್ಬಲವಾಗಿತ್ತು. ಇದನ್ನು ದುರುಪಯೋಗಪಡಿಸಿಕೊಂಡ ಆರೋಪಿಗಳು, ಹಣವನ್ನು ತಮ್ಮ ಬಟ್ಟೆಯೊಳಗೆ ಬಚ್ಚಿಟ್ಟುಕೊಂಡು ಮಂದಿರದ ಆವರಣದಿಂದ ಹೊರಗೆ ಸಾಗಿಸುತ್ತಿದ್ದರು. ಈ ಕಳ್ಳತನದ ಪ್ರಕ್ರಿಯೆಯು 2025ರ ಏಪ್ರಿಲ್ ಅಥವಾ ಮೇ ತಿಂಗಳಿನಿಂದ ಆರಂಭವಾಗಿ ಈ ವರ್ಷದ ಜೂನ್ 5ರವರೆಗೆ ಪ್ರತಿದಿನ ಸಾಗುತ್ತಿತ್ತು ಎಂದು ತನಿಖಾ ತಂಡ ಶಂಕಿಸಿದೆ. ಅಧಿಕೃತ ತನಿಖೆ ಆರಂಭವಾಗುವ ಮುನ್ನವೇ ಕೆಲವು ಸಿಬ್ಬಂದಿಗಳಿಂದ ಸುಮಾರು 78.94 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದಲ್ಲದೆ ಜೂನ್ 4 ರಂದು ಎಣಿಕೆ ಕೊಠಡಿಗೆ ಹೊಂದಿಕೊಂಡಿರುವ ಶೌಚಾಲಯದಿಂದ 2.25 ಲಕ್ಷ ರೂಪಾಯಿ ನಗದನ್ನು ಪತ್ತೆಹಚ್ಚಲಾಗಿತ್ತು. ಈ ಅಕ್ರಮಗಳು ಬೆಳಕಿಗೆ ಬರುತ್ತಿದ್ದಂತೆ ಟ್ರಸ್ಟ್‌ನ ಅಧಿಕಾರಿಗಳು ಉತ್ತರ ಪ್ರದೇಶ ಸರ್ಕಾರಕ್ಕೆ ಪಾರದರ್ಶಕ ತನಿಖೆಗೆ ಮನವಿ ಮಾಡಿದ್ದರು.
ಈ ಇಡೀ ಹಗರಣದಲ್ಲಿ ಟ್ರಸ್ಟಿ ಡಾ. ಅನಿಲ್ ಮಿಶ್ರಾ ಅವರ ಪಾತ್ರ ಈಗ ತೀವ್ರ ಶಂಕೆಗೊಳಗಾಗಿದೆ. ದೇಣಿಗೆ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಕಡ್ಡಾಯ ನಿಯಮಾವಳಿಗಳನ್ನು (SOP) ಅವರು ಪಾಲಿಸಿರಲಿಲ್ಲ ಮತ್ತು ತಮಗೆ ಬೇಕಾದವರನ್ನು ಈ ಕಾರ್ಯಕ್ಕೆ ನೇಮಿಸಿದ್ದರು ಎಂದು ಎಸ್‌ಐಟಿ ವರದಿ ಉಲ್ಲೇಖಿಸಿದೆ.
ಮಿಶ್ರಾ ಅವರು ಸುಭಾಷ್ ಶ್ರೀವಾಸ್ತವ ಎಂಬುವವರನ್ನು ಎಣಿಕಾ ಕೇಂದ್ರದ ಉಸ್ತುವಾರಿಯನ್ನಾಗಿ ಮಾಡಿದ್ದರು. ಇದರೊಂದಿಗೆ ಚಂಪತ್ ರಾಯ್ ಅವರ ಆಪ್ತ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಎಂಬಾತನೂ ಪ್ರಮುಖ ಆರೋಪಿಯಾಗಿದ್ದು, ಈತನೂ ಯಾವುದೇ ಲಿಖಿತ ಅನುಮತಿ ಇಲ್ಲದೆ ಹಣದ ಪೆಟ್ಟಿಗೆಗಳ (ಹುಂಡಿ) ಚಾವಿಗಳನ್ನು ಬಳಸುತ್ತಿದ್ದ ಎನ್ನಲಾಗಿದೆ. ಟಿನ್ನು ಯಾದವ್ ಶಿಫಾರಸಿನ ಮೇರೆಗೆ ಮನೀಶ್ ಕುಮಾರ್ ಯಾದವ್ ಎಂಬಾತನನ್ನು ಎಣಿಕೆ ಕೊಠಡಿಯಲ್ಲಿ ನಿಯೋಜಿಸಲಾಗಿತ್ತು.
ಟ್ರಸ್ಟ್‌ನ ಸುದೀರ್ಘ ಸಭೆಯಲ್ಲಿ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದ್ದು, ಕೃಷ್ಣ ಮೋಹನ್ ಅವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಅಲ್ಲದೆ ಟ್ರಸ್ಟ್‌ಗೆ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು (ಸಿಇಒ) ಆಯ್ಕೆ ಮಾಡಲು ನಿವೃತ್ತ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ವಿಷ್ಣುಕಾಂತ್ ಚತುರ್ವೇದಿ ಮತ್ತು ಟ್ರಸ್ಟಿ ಸುರೇಶ್ ಹಾವರೆ ಅವರನ್ನೊಳಗೊಂಡ ಮೂರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.
ಈ ಘಟನೆಯಿಂದ ತೀವ್ರ ಆಘಾತವಾಗಿದೆ ಎಂದು ತಿಳಿಸಿರುವ ಟ್ರಸ್ಟ್, ಭಕ್ತರು ಸಮರ್ಪಿಸಿರುವ ಚಿನ್ನಾಭರಣಗಳು ಹಾಗೂ ನಗದೇತರ ಕಾಣಿಕೆಗಳು ಸುರಕ್ಷಿತವಾಗಿವೆ ಎಂದು ಸ್ಪಷ್ಟಪಡಿಸಿದೆ. ಜುಲೈ 22 ರಂದು ಮತ್ತೊಂದು ಸಭೆ ನಡೆಯಲಿದ್ದು, ಆ ವೇಳೆಗೆ ಸಲ್ಲಿಕೆಯಾಗಲಿರುವ ಎಸ್‌ಐಟಿಯ ಅಂತಿಮ ವರದಿಯ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.







