ಸಮಗ್ರ ನ್ಯೂಸ್: ರಾಜ್ಯದಲ್ಲಿ ಈ ಬಾರಿ ಸರಿಯಾಗಿ ಮಳೆಯಾಗುವುದಿಲ್ಲ, ಭೀಕರ ಬರಗಾಲ ಆವರಿಸಲಿದೆ ಎಂಬ ವದಂತಿಗಳು ಇತ್ತೀಚೆಗೆ ಅನ್ನದಾತರಲ್ಲಿ ತೀವ್ರ ಆತಂಕ ಮೂಡಿಸಿದ್ದವು. ಭೀಕರ ಬರಗಾಲದ ಭೀತಿಯಿಂದ ಕೃಷಿ ಚಟುವಟಿಕೆಗಳ ಗತಿಯೇನು ಎಂದು ಕಂಗಾಲಾಗಿದ್ದ ರೈತರಿಗೆ ಹವಾಮಾನ ತಜ್ಞರು ಹಾಗೂ ವಿಜ್ಞಾನಿಗಳು ಮಹತ್ವದ ಮಾಹಿತಿ ನೀಡುವ ಮೂಲಕ ದೊಡ್ಡ ನಿರಾಳತೆ ತಂದಿದ್ದಾರೆ.
ರಾಜ್ಯದಲ್ಲಿ ಯಾವುದೇ ಭೀಕರ ಬರಗಾಲ ಬರುವುದಿಲ್ಲ ಮತ್ತು ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ತಜ್ಞರು ಖಡಕ್ ಆಗಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಲಿದೆ ಎಂಬ ಆತಂಕದ ಮಾತುಗಳಿಗೆ ಕೃಷಿ ಹವಾಮಾನ ತಜ್ಞ ಡಾ. ಎಂ.ಬಿ. ರಾಜೇಗೌಡ ಅವರು ತೆರೆ ಎಳೆದಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲ ಬರುತ್ತದೆ ಎಂಬುದು ಕೇವಲ ಸುಳ್ಳು ಸುದ್ದಿ, ರೈತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಧೈರ್ಯ ತುಂಬಿದ್ದಾರೆ.
ಪ್ರಸ್ತುತ ಹವಾಮಾನದಲ್ಲಿ ‘ಎಲ್ ನಿನೋ’ ಪ್ರಭಾವ ಇರುವುದು ನಿಜ. ಆದರೆ, ಇದರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೇಕಡಾ -64ರಷ್ಟು ಮಳೆ ಕೊರತೆಯಾಗುತ್ತದೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಇದು ಸಂಪೂರ್ಣ ಸುಳ್ಳಾಗಿದೆ. ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದ ಮಳೆ ಕೊರತೆಯಾಗಲು ಸಾಧ್ಯವೇ ಇಲ್ಲ.
ಎಲ್ ನಿನೋ ಎಫೆಕ್ಟ್‌ನಿಂದಾಗಿ ರಾಜ್ಯದಲ್ಲಿ ಸದ್ಯ ಕೇವಲ ಶೇಕಡಾ -8ರಷ್ಟು ಮಾತ್ರ ಮಳೆ ಕೊರತೆ ಸಂಭವಿಸುವ ಸಾಧ್ಯತೆಯಿದೆ. ಹಿಂದೆ 1964-65ರ ಅವಧಿಯಲ್ಲಿ ಶೇಕಡಾ -28ರಷ್ಟು ಮಳೆ ಕೊರತೆಯಾದಾಗ ಇಡೀ ದೇಶವೇ ತತ್ತರಿಸಿತ್ತು. ಆದರೆ ಸದ್ಯದ ಪರಿಸ್ಥಿತಿ ಅಷ್ಟೊಂದು ಭೀಕರವಾಗಿಲ್ಲ ಎಂದು ಅವರು ವಿವರಿಸಿದ್ದಾರೆ.
ಎಲ್ ನಿನೋ ನೆಗೆಟಿವ್ ಇಂಪ್ಯಾಕ್ಟ್ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಒಂದು ಸಾಮಾನ್ಯ ನೈಸರ್ಗಿಕ ವಿದ್ಯಮಾನವಾಗಿದೆ. ಇದರಿಂದ ಶೇಕಡಾ -4 ರಿಂದ -8ರಷ್ಟು ಮಳೆ ಕೊರತೆಯಾಗಬಹುದಾದರೂ, ಮಳೆ ಹಂಚಿಕೆ ಸಮರ್ಪಕವಾಗಿದ್ದರೆ ಕೃಷಿ ಚಟುವಟಿಕೆಗಳ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ.
ನೆಗೆಟಿವ್ ನಾರ್ಮಲ್‌ನಿಂದಾಗಿ ಡ್ಯಾಮ್‌ಗಳು ಕೂಡ ತುಂಬಬಹುದು, ಹೀಗಾಗಿ ಕೃಷಿಗೆ ಇದರಿಂದ ಯಾವುದೇ ಧಕ್ಕೆ ಇಲ್ಲ. ಇದರ ಮಧ್ಯೆ ಈಗ ‘ವೆಸ್ಟರ್ನ್ ಡಿಸ್ಟ್ರಬೆನ್ಸ್’ (ಪಾಶ್ಚಿಮಾತ್ಯ ಮುಂಗಾರು ಮಾರುತಗಳು) ಆರಂಭವಾಗಿರುವುದರಿಂದ ಉತ್ತರ ಮತ್ತು ಮಧ್ಯ ಭಾರತದಲ್ಲಿ ಉತ್ತಮ ಮಳೆಯಾಗುತ್ತಿರುವುದು ಶುಭ ಸೂಚಕವಾಗಿದೆ.
ಅಲ್ಲದೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಾಜ್ಯದಲ್ಲಿ ಬಿತ್ತನೆ ಕಾರ್ಯ ಕೂಡ ಗಣನೀಯವಾಗಿ ಹೆಚ್ಚಾಗಿದೆ. ಕಳೆದ ಸಲ 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿದ್ದ ಬಿತ್ತನೆ ಕ್ಷೇತ್ರ, ಈ ಬಾರಿ 17 ಲಕ್ಷ ಹೆಕ್ಟೇರ್‌ಗೆ ವಿಸ್ತರಿಸಿದೆ. ಹೀಗಾಗಿ ರೈತಾಪಿ ವರ್ಗ ನೆಮ್ಮದಿಯಿಂದ ಇರಬಹುದು ಎಂದು ಅವರು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ (IMD) ವಿಜ್ಞಾನಿ ಸಿ.ಎಸ್. ಪಾಟೀಲ್ ಅವರು ಮಳೆಯ ಅಂಕಿ-ಅಂಶಗಳ ಕುರಿತು ಮಾತನಾಡಿದ್ದು, ಕಳೆದ ವರ್ಷ ರಾಜ್ಯಾದ್ಯಂತ ಸರಾಸರಿ ಶೇಕಡಾ 14ರಷ್ಟು ಮಳೆಯ ಪ್ರಮಾಣ ಹೆಚ್ಚಾಗಿತ್ತು. ಅದರಲ್ಲಿಯೂ ಉತ್ತರ ಒಳನಾಡಿನಲ್ಲಿ ಶೇಕಡಾ 50ರಷ್ಟು ಮಳೆ ಹೆಚ್ಚಾಗಿದ್ದರೆ, ದಕ್ಷಿಣ ಒಳನಾಡಿನಲ್ಲಿ ಶೇಕಡಾ 4ರಷ್ಟು ಮಳೆ ಕಡಿಮೆಯಾಗಿತ್ತು. ಆದರೆ ಈ ವರ್ಷ ಎಲ್ ನಿನೋ ಎಫೆಕ್ಟ್‌ನಿಂದಾಗಿ ರಾಜ್ಯದಲ್ಲಿ ಒಟ್ಟಾರೆ ಸರಾಸರಿ ಶೇಕಡಾ 10ರಷ್ಟು ಮಳೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.








