ಸಮಗ್ರ ನ್ಯೂಸ್: ಲಾರಿಯೊಂದರಲ್ಲಿ ಜಾನುವಾರುಗಳನ್ನು ಅತ್ಯಂತ ಅಮಾನುಷ ಹಾಗೂ ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ ಜಾಲವನ್ನು ಉಪ್ಪಿನಂಗಡಿ ಪೊಲೀಸರು ಭಜರಂಗದಳ ಕಾರ್ಯಕರ್ತರ ಮಾಹಿತಿಯ ಮೇರೆಗೆ ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಕೃತ್ಯದಲ್ಲಿ ತೊಡಗಿದ್ದ ಲಾರಿ ಚಾಲಕ ಮತ್ತು ನಿರ್ವಾಹಕನನ್ನು ವಶಕ್ಕೆ ಪಡೆದಿರುವ ಪೊಲೀಸರು, ಲಾರಿಯಲ್ಲಿದ್ದ 16 ಜಾನುವಾರುಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಘಟ್ಟ ಪ್ರದೇಶದಿಂದ ಲಾರಿಯೊಂದರಲ್ಲಿ ಜಾನುವಾರುಗಳನ್ನು ಕಾನೂನುಬಾಹಿರವಾಗಿ ಕೇರಳ ಭಾಗಕ್ಕೆ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಭಜರಂಗದಳದ ಕಾರ್ಯಕರ್ತರಿಗೆ ಲಭ್ಯವಾಗಿತ್ತು. ಅವರು ತಕ್ಷಣವೇ ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಮಾಹಿತಿ ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಉಪ್ಪಿನಂಗಡಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯನ್ನು ತಡೆದು ತಪಾಸಣೆ ನಡೆಸಿದ್ದಾರೆ. ಪೊಲೀಸರು ಲಾರಿಯನ್ನು ಪರಿಶೀಲಿಸಿದಾಗ ಒಳಗೆ ಅತ್ಯಂತ ಕಿಕ್ಕಿರಿದು, ಕ್ರೂರವಾಗಿ ತುಂಬಲಾಗಿದ್ದ ಸುಮಾರು 16 ಜಾನುವಾರುಗಳು ಪತ್ತೆಯಾಗಿವೆ.
ಪೊಲೀಸರು ತಕ್ಷಣವೇ ಜಾನುವಾರುಗಳನ್ನು ಕೆಳಗಿಳಿಸಿ ರಕ್ಷಣಾ ಕ್ರಮ ಕೈಗೊಂಡಿದ್ದಾರೆ. ಸ್ಥಳದಲ್ಲೇ ಲಾರಿ ಚಾಲಕ ಮತ್ತು ಕ್ಲೀನರ್ (ನಿರ್ವಾಹಕ)ನನ್ನು ಪೊಲೀಸರು ಬಂಧಿಸಿದ್ದು, ಲಾರಿಯಲ್ಲಿದ್ದ ಮತ್ತೊಬ್ಬ ಆರೋಪಿ ಪೊಲೀಸರನ್ನು ಕಂಡು ಸ್ಥಳದಿಂದ ಓಡಿ ಪರಾರಿಯಾಗಿದ್ದಾನೆ. ಪರಾರಿಯಾದ ಆರೋಪಿಗಾಗಿ ಪೊಲೀಸರು ಜಾಲ ಬೀಸಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.








