ಸಮಗ್ರ ನ್ಯೂಸ್: ಕೇರಳದ ಕೊಟ್ಟಿಯೂರು ಮಹಾದೇವ ದೇಗುಲ ತೆರೆದಿದ್ದು, ಈ ವರ್ಷ ಬಾರಿ ವಿವಾದವನ್ನೇ ಸೃಷ್ಟಿಸಿದೆ. ಕೊಟ್ಟಿಯೂರಿಗೆ ತೆರಳಿದ ಕನ್ನಡಿಗರಿಗೆ ಅಪಮಾನ ಮಾಡಿದ ಆರೋಪದ ನಡುವೆ ದೇವಸ್ಥಾನದಲ್ಲಿ ಬಾವಲಿಕಟ್ಟು ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ.
ಸುಳ್ಯದ ಮೂಲದ ಮುಸ್ಲಿಂ ಮುಖಂಡ ಶಹೀದ್ ತೆಕ್ಕಿಲ್ ಎಂಬುವವರು ವಿವಾದದ ಕಿಡಿ ಹೊತ್ತಿಸಿದ್ದಾರೆ. ಇದು ಮುಸ್ಲಿಮರು ಅಂದಿನಿಂದ ಮಾಡಿಕೊಂಡು ಬಂದಿದ್ದ ಪರಂಪರೆ ಅಂತ ಬಾವಲಿ ನದಿಗೆ ಕಟ್ಟಿದ್ದಾರೆ. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ದಿನದಿಂದ ದಿನಕ್ಕೆ ಬಾವಲಿಕಟ್ಟು ವಿವಾದ ತೀವ್ರ ಸ್ವರೂಪ ಪಡೆಯುತ್ತಿದೆ. ಸುಳ್ಯದ ಮೂಲದ ಮುಖಂಡ ಶಹೀದ್ ಎಂಬವರು ಕೊಟ್ಟಿಯೂರು ದೇವಸ್ಥಾನದ ಬಳಿಯ ಬಾವಲಿ ನದಿಗೆ ಕಲ್ಲು ಜೋಡಿಸುವ ಹೆಸರಿನಲ್ಲಿ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ವರ್ಷದಲ್ಲಿ ಒಂದು ತಿಂಗಳು ಮಾತ್ರ ತೆರೆದಿರುವ ಈ ಕೊಟ್ಟಿಯೂರು ದೇವಸ್ಥಾನಕ್ಕೆ ದೇಶದ ಹಲವು ಭಾಗಗಳಿಂದ ಭಕ್ತ ಸಾಗರವೇ ಹರಿದು ಬರುತ್ತದೆ. ಕರ್ನಾಟಕದಿಂದಲೂ ಭಕ್ತಾಧಿಗಳು ಆಗಮಿಸುತ್ತಿದ್ದಾರೆ. ಒಟ್ಟು 27 ದಿನಗಳ ಕಾಲ ನಡೆಯಲಿರುವ ಕೊಟ್ಟಿಯೂರು ದೇವಸ್ಥಾನ ಜಾತ್ರೆ ಶುರುವಾಗೋ ಒಂದು ದಿನ ಮುಂಚಿತವಾಗಿ ಬಾವಲಿ ನದಿಗೆ ಕಲ್ಲಿಟ್ಟು ವಿವಾದ ಹುಟ್ಟು ಹಾಕಿದ್ದಾರೆ ಶಹೀದ್.
ದಶಕಗಳ ಹಿಂದೆ ಮುಸ್ಲಿಮರು ಬಂದು ಈ ರೀತಿ ನದಿಗೆ ಕಲ್ಲುಗಳನ್ನ ಜೋಡಿಸುವ ಸಂಪ್ರದಾಯ ಇತ್ತು. ಆದ್ರೆ ನಂತರದಲ್ಲಿ ಆ ಸಂಪ್ರದಾಯಕ್ಕೆ ಬಿಟ್ಟಿದ್ರು. ಈಗ ಮತ್ತೆ ಸಂಪ್ರದಾಯ ಮುಂದುವರೆಸುವ ನಿಟ್ಟಿನಲ್ಲಿ ಕಲ್ಲು ಜೋಡಿಸಿರೋದಾಗಿ ಶಹೀದ್ ವಿಡಿಯೋದಲ್ಲಿ ಹೇಳಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಸಂಚಲನ ಮೂಡಿಸಿದೆ. ಹಿಂದೂಗಳು ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂರು ನದಿಯಲ್ಲಿ ಕಲ್ಲು ಜೋಡಿಸಿದ್ದಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದೆ. ಇದು ಹಿಂದೂ ಧರ್ಮದವರ ಭಾವನೆಗೆ ಧಕ್ಕೆ ಮಾಡುವ ಷಡ್ಯಂತ್ರ ಎಂದು ಆರೋಪ ಮಾಡಿದ್ದಾರೆ.
ಸದ್ಯ ಈ ಪ್ರಕರಣದಲ್ಲಿ ಮುಜರಾಯಿ ಇಲಾಖೆ ಮಧ್ಯಪ್ರವೇಶ ಮಾಡಿದ್ದು, ಘಟನೆ ನಡೆದು ಹತ್ತು ದಿನಗಳು ಕಳೆದರೂ ವಿವಾದ ತಣ್ಣಗಾಗಿಲ್ಲ. ಇದರ ನಡುವೆಯೇ ಕೊಟ್ಟಿಯೂರಿಗೆ ಭೇಟಿ ಕೊಟ್ಟ ಕನ್ನಡಿಗರ ಮೇಲೆ ಹಲ್ಲೆ ವಿಚಾರ ಕೂಡ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗ್ತಿದೆ.
ಕನ್ನಡಿಗರಿಂದ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಆಗಿದೆ ಎಂದು ಸ್ಥಳೀಯರು ಕರ್ನಾಟಕದ ಭಕ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪವಿದೆ. ಈ ವಿವಾದಗಳ ನಡುವೆಯೇ ಕೊಟ್ಟಿಯೂರು ದೇವಸ್ಥಾನದ ಜಾತ್ರೆ ಮುಂದುವರೆದಿದೆ. ಕಣ್ಣೂರು ಜಿಲ್ಲೆಯ ಪೇರವೂರಿನ ಕೊಟ್ಟಿಯೂರು ದೇವಸ್ಥಾನದ ಜಾತ್ರೆಗೆ ಜೂನ್ 27 ರಂದು ತೆರೆ ಬೀಳಲಿದೆ. ಮತ್ತೆ ಒಂದು ವರ್ಷದ ನಂತರವೇ ಮತ್ತೆ ಕೊಟ್ಟಿಯೂರು ದೇವಸ್ಥಾನ ತೆರೆಯಲಿದೆ.








