ಸಮಗ್ರ ನ್ಯೂಸ್: ಭಾರತದ ರಾಜಕೀಯ ಇತಿಹಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸದೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ದಿನಗಳ ಕಾಲ ಸತತವಾಗಿ ಅಧಿಕಾರ ನಡೆಸಿದ ಪ್ರಜಾಸತ್ತಾತ್ಮಕ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಇದರೊಂದಿಗೆ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು (Jawaharlal Nehru) ಅವರ ಹೆಸರಿನಲ್ಲಿದ್ದ ಸುದೀರ್ಘ ಅವಧಿಯ ದಾಖಲೆಯನ್ನು ಮೋದಿ ಅವರು ಹಿಂದಿಕ್ಕಿದ್ದಾರೆ. ಈ ಐತಿಹಾಸಿಕ ಸಾಧನೆಗೆ ವಿಶ್ವದ ಹಲವು ದೇಶಗಳ ನಾಯಕರು ಪ್ರಧಾನಿ ಮೋದಿಯವರ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
ಮೋದಿ ಅವರು ಪ್ರಧಾನಿಯಾಗಿ ಸತತ 4,399 ದಿನಗಳನ್ನು ಪೂರೈಸುವ ಮೂಲಕ ಈ ಅಪರೂಪದ ಮೈಲಿಗಲ್ಲು ತಲುಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಸರ್ಕಾರವು ಯಶಸ್ವಿಯಾಗಿ 12 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲೇ ಈ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ. ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಪ್ರಧಾನಿ ಮೋದಿಯವರ ದೂರದರ್ಶಿತ್ವದ ನಾಯಕತ್ವವು ಭಾರತದ ರಾಜಕೀಯ ಮತ್ತು ಆಡಳಿತದ ದಿಕ್ಕನ್ನೇ ಬದಲಿಸಿದೆ ಎಂದು ಜಾಗತಿಕ ನಾಯಕರು ಕೊಂಡಾಡಿದ್ದಾರೆ.
ಕಳೆದ 12 ವರ್ಷಗಳಲ್ಲಿ ಭಾರತದ ವಿದೇಶಾಂಗ ನೀತಿಯು ಜಾಗತಿಕ ಮಟ್ಟದಲ್ಲಿ ‘ಬ್ರಾಂಡ್ ಇಂಡಿಯಾ’ದ ಮೌಲ್ಯವನ್ನು ಹೆಚ್ಚಿಸಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಕೇಂದ್ರ ಸಚಿವರುಗಳು ಕೂಡ ಪ್ರಧಾನಿ ಮೋದಿಯವರ ಈ ಅಪರೂಪದ ಸಾಧನೆಯನ್ನು ದೇಶದ ಸರ್ವತೋಮುಖ ಬೆಳವಣಿಗೆಯ ಸಂಕೇತ ಎಂದು ಬಣ್ಣಿಸಿದ್ದು, ಜನಸಾಮಾನ್ಯರ ಹಿನ್ನೆಲೆಯಿಂದ ಬಂದು ಇಡೀ ಜಗತ್ತೇ ಗೌರವಿಸುವಂತಹ ಸ್ಥಾನಕ್ಕೆ ದೇಶವನ್ನು ತಲುಪಿಸಿರುವ ಮೋದಿಯವರ ಸೇವಾ ಮನೋಭಾವಕ್ಕೆ ಧನ್ಯವಾದ ಅರ್ಪಿಸಿದ್ದಾರೆ.








