ಸಮಗ್ರ ನ್ಯೂಸ್: ಬಹುಷಃ ಬಿಜೆಪಿಯ ನಾಯಕರು ಇಷ್ಟೊಂದು ಸಂಪ್ರದಾಯಗಳನ್ನು ಪಾಲನೆ ಮಾಡುತ್ತಾರೋ ಗೊತ್ತಿಲ್ಲ, ಡಿಕೆ ಶಿವಕುಮಾರ್ ಅವರು ಸಿಎಂ ಆಗುವುದಕ್ಕಿಂದ ಮೊದಲು ಹಾಗೂ ನಂತರದಲ್ಲೂ ಧಾರ್ಮಿಕ ಸಂಪ್ರದಾಯಗಳನ್ನು ಹಾಗೂ ದೈವ ಭಕ್ತಿಯ ಉತ್ಕೃಷ್ಟತೆಯನ್ನು ಪ್ರದರ್ಶನ ಮಾಡಿದ್ದಾರೆ. ಈ ಮೂಲಕ ನಾನೊಬ್ಬ ಅಪ್ಪಟ ದೈವ ಭಕ್ತ ಎಂಬುವುದನ್ನು ಸಾಬೀತು ಮಾಡಿದ್ದಾರೆ. ಹೀಗಿರುವಾಗ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ನಾಯಕರು ಟಾರ್ಗೆಟ್ ಮಾಡುವಾಗ ಹಿಂದೂ ವಿರೋಧಿ ಎನ್ನಲು ಸಾಧ್ಯವಿಲ್ಲ. ಹಿಂದುತ್ವ ಹೋರಾಟ ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್ ಅವರನ್ನು ಕಟ್ಟಿಹಾಕಲು ಸಾಧ್ಯವಿಲ್ಲ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಎಲ್ಲಾ ಧರ್ಮದ ಧಾರ್ಮಿಕ ಮುಖಂಡರುಗಳ ಉಪಸ್ಥಿತಿ. ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ನೊಣವಿನಕೆರೆ ಅಜ್ಜಯ್ಯನಿಗೆ ನಮಸ್ಕಾರ. ಪ್ರಮಾಣ ವಚನ ಸ್ವೀಕರಿಸಿದ್ದೂ ಅಜ್ಜಯ್ಯನ ಹೆಸರಿನಲ್ಲಿ. ಅಷ್ಟೇ ಯಾಕೆ, ಸಿಎಂ ಆಗಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕಾರಕ್ಕೂ ಮುನ್ನ ವಿಧಾನಸೌಧದ ಕೊಠಡಿಯಲ್ಲಿ ನೊಣವಿನಕೆರೆ ಸ್ವಾಮೀಜಿಗಳಿಂದ ಪೂಜೆ ಹಾಗೂ ವಿಧಾನಸೌಧದ ಮೆಟ್ಟಿಲುಗಳಿಗೆ ನೀರಿನ ಪ್ರೋಕ್ಷಣೆ ನಡೆದಿತ್ತು.
ಈ ಹಿಂದೆ ಸದನದಲ್ಲಿ ಸದಾ ವತ್ಸಲೆ ಮಾತೃ ಭೂಮಿ ಹಾಡಿ ಡಿಕೆ ಶಿವಕುಮಾರ್ ವಿವಾದ ಸೃಷ್ಟಿಸಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂಬ ಚರ್ಚೆಗಳು ನಡೆದಿದ್ದವು. ಆದರೆ ಡಿಕೆಶಿಗೆ ಈ ವಿಚಾರ ಹಿನ್ನಡೆ ಆಗಿರಲಿಲ್ಲ. ಬದಲಾಗಿ ಬಿಜೆಪಿ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿತ್ತು. ಬಿಜೆಪಿ ಪಾಲಿಗೆ ಸಿದ್ದರಾಮಯ್ಯ ಹಿಂದೂ ವಿರೋಧಿಯಾಗಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ ಹಿಂದೂ ವಿರೋಧಿಯಾಗಿ ನಡೆದುಕೊಳ್ಳಲಿದೆ ಎಂಬ ವಾದವನ್ನು ಬಿಜೆಪಿ ಮಾಡುತ್ತಾ ಬಂದಿದೆ. ಕಾಂಗ್ರೆಸ್ ಹಿಂದೂ ವಿರೋಧಿ ಹಾಗೂ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿದೆ ಎಂಬ ಆರೋಪ ಬಿಜೆಪಿಯದ್ದಾಗಿತ್ತು. ಈ ಕಾರಣಕ್ಕಾಗಿ ಸಿದ್ದರಾಮಯ್ಯ ಅವರಿಗೆ ಸಿದ್ದರಾಮುಲ್ಲಾ ಖಾನ್ ಎಂದೂ ಬಿಜೆಪಿ ನಾಯಕರು ನಾಮಕರಣ ಮಾಡಿ ಟೀಕೆ ಮಾಡುತ್ತಿದ್ದರು.
ಸಿದ್ದರಾಮಯ್ಯ ಅವರು ಸದಾ ಮೌಡ್ಯದ ವಿರುದ್ದ ಮಾತನಾಡುತ್ತಿದ್ದರು. ಅಲ್ಲದೆ, ಅಂಬೇಡ್ಕರ್, ಬಸವ ತತ್ವ, ಪ್ರಗತಿಪರ ಚಿಂತನೆಯ ಪರವಾಗಿ ಧ್ವನಿ ಎತ್ತುತ್ತಿದ್ದರು. ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರೂ, ಅತೀವ ನಂಬಿಕೆಯನ್ನು ಪ್ರದರ್ಶನ ಮಾಡಿದವರಲ್ಲ. ಆದರೆ ಇದೇ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಭಿನ್ನವಾಗಿ ನಡೆದುಕೊಳ್ಳುತ್ತಿದ್ದರು.
ಕಾಂಗ್ರೆಸ್ ಪಕ್ಷ ಕುಂಬಮೇಳದ ಬಗ್ಗೆ ಭಿನ್ನ ನಿಲುವು ಹೊಂದಿದ್ದ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಕುಂಭ ಮೇಳದಲ್ಲಿ ಭಾಗಿಯಾಗಿದ್ದರು. ಅಲ್ಲದೆ, ಜಗ್ಗಿ ವಾಸುದೇವ ಅವರ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ವೇದಿಕೆ ಹಂಚಿಕೊಂಡಿದ್ದರು. ಇವೆಲ್ಲವೂ ಚರ್ಚೆಗೆ ಒಳಗಾಗಿತ್ತು. ಹೀಗಿದ್ದರೂ ಡಿಕೆ ಶಿವಕುಮಾರ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.
ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಬಿಂಬಿಸುತ್ತಿದ್ದ ಬಿಜೆಪಿಗೆ ಇದೀಗ ತನ್ನ ತಂತ್ರಗಾರಿಕೆಯನ್ನು ಬದಲಾವಣೆ ಮಾಡಬೇಕಾಗಿದೆ. ಸಿದ್ದರಾಮಯ್ಯ ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಿದಂತೆ ಡಿಕೆ ಶಿವಕುಮಾರ್ ಅವರನ್ನು ಬಿಂಬಿಸಲು ಸಾಧ್ಯವಿಲ್ಲ. ಅವರ ನಡೆ ನುಡಿಗಳೇ ಬಿಜೆಪಿ ವಾದವನ್ನು ಸೋಲಿಸುತ್ತದೆ. ಹೀಗಿರುವಾಗ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಭಿನ್ನ ತಂತ್ರಗಾರಿಕೆಯನ್ನು ಪ್ರಯೋಗ ಮಾಡುವ ಸಾಧ್ಯತೆ ಇದೆ.
ಹಿಂದುತ್ವದ ವಿಚಾರವನ್ನು ಹೆಚ್ಚಾಗಿ ಪ್ರಸ್ತಾಪ ಮಾಡದೆ ಸರ್ಕಾರದ ವೈಫಲ್ಯಗಳು ಹಾಗೂ ಡಿಕೆ ಶಿವಕುಮಾರ್ ಅವರ ವಿರುದ್ಧದ ಆರೋಪಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಜನಾಭಿಪ್ರಾಯ ರೂಪಿಸುವ ಪ್ರಯತ್ನವನ್ನು ನಡೆಸಬಹುದು. ಆದರೆ ಅದರಲ್ಲಿ ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತಾರೆ? ಎಂಬುವುದು ಸದ್ಯದ ಕುತೂಹಲ.








