ಕೇರಳಂ ವಿಧಾನಸಭೆಯಲ್ಲಿ ಮೊಳಗಿದ ಕನ್ನಡ ‌ಡಿಂಡಿಮ| ಮಂಜೇಶ್ವರ ಶಾಸಕ‌ ಎ.ಕೆ ಎಂ. ಅಶ್ರಫ್ ರಿಂದ ಕನ್ನಡದಲ್ಲಿ ಪ್ರಮಾಣವಚನ

ಸಮಗ್ರ ನ್ಯೂಸ್: ಕೇರಳಂ ರಾಜ್ಯದ ವಿಧಾನಸಭೆಯಲ್ಲಿ ಕನ್ನಡ ಡಿಂಡಿಮ ಮೊಳಗಿದೆ. ಮಲಯಾಳಂ ಅಧಿಕೃತ ಭಾಷೆಯಾದ ಕೇರಳದ ವಿಧಾನಸಭೆಯಲ್ಲಿ ಗುರುವಾರ ಯುಡಿಎಫ್ ಶಾಸಕ ಎಂಕೆಎಂ ಆಶ್ರಫ್ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಮನ ಸೆಳೆದಿದ್ದಾರೆ. ಗುರುವಾರ ಕೇರಳಂ ವಿಧಾನಸಭೆಯ ಅಧಿವೇಶನದಲ್ಲಿ ಅಶ್ರಫ್ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

Ad Widget ... ..

‘ಎ.ಕೆ.ಎಂ ಅಶ್ರಫ್ ಎಂಬವನಾದ ನಾನು ವಿಧಾನಸಭೆಯ ಸದಸ್ಯನಾಗಿ ಚುನಾಯಿತನಾಗಿ ಕಾನೂನು ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ನಿಜವಾದ ಶೃದ್ದೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದು ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು, ನಾನು ಕೈಗೊಳ್ಳಲಿರುವ ಕರ್ತವ್ಯವನ್ನು ಶೃದ್ದಾಪೂರ್ವಕವಾಗಿ ನಿರ್ವಹಿಸುತ್ತೇನೆಂದು ಸೃಷ್ಟಿಕರ್ತನ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಎಂದು ಕನ್ನಡದಲ್ಲೇ ಪ್ರಮಾಣ ವಚನವನ್ನು ಸ್ವೀಕರಿಸಿದರು.

Ad Widget

ಅಶ್ರಫ್ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಕೇರಳದ ಸಿಎಂ ವಿಡಿ ಸತೀಶನ್ ಹಾಗೂ ಸಚಿವರು ಮೇಜು ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು. ಎಂಕೆಎಂ ಅಶ್ರಫ್ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಶಾಸಕರಾಗಿದ್ದಾರೆ. ಮಾತೃ ಭಾಷೆ ಮಲಯಾಳಂ ಆದರೂ ಅವರಿಗೆ ಕನ್ನಡದ ಬಗ್ಗೆ ವಿಪರೀತ ಒಲವಿದೆ. ಮಂಜೇಶ್ವರ ಕೇರಳ ಮತ್ತು ಕರ್ನಾಟಕದ ಗಡಿ ಜಿಲ್ಲೆಯಲ್ಲಿದೆ.

ಅಶ್ರಫ್ ಅವರು ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಕನ್ನಡಲ್ಲೇ ಪದವಿ ಪಡೆದುಕೊಂಡಿದ್ದಾರೆ. ಚುನಾವಣಾ ಪ್ರಚಾರದಲ್ಲೂ ಅವರು ಕನ್ನಡ ಭಾಷೆಯಲ್ಲಿ ಮಾತನಾಡುವ ಮೂಲಕ ಗಮನ ಸೆಳೆದಿದ್ದರು. ಮಂಜೇಶ್ವರ ಕ್ಷೇತ್ರದಲ್ಲಿ ಕನ್ನಡ ಪರವಾಗಿ ಹಲವು ಹೋರಾಟಗಳು ನಡೆದ ಇತಿಹಾಸವೂ ಇದೆ.

ಮಂಜೇಶ್ವರ ಭಾಗದಲ್ಲಿ ಕನ್ನಡ ಶಾಲೆಗಳು ಇದ್ದು ಅವುಗಳ ಉಳಿವಿಗಾಗಿ ಹೋರಾಟಗಳು ನಡೆದಿವೆ. ಗಡಿ ಭಾಗದ ಕ್ಷೇತ್ರವಾಗಿರುವುದರಿಂದ ಕನ್ನಡಿಗರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕನ್ನಡ ಮಾತ್ರವಲ್ಲದೆ ತುಳು ಭಾಷೆ ಮಾತನಾಡುವವರು ಸಿಗುತ್ತಾರೆ.

ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಚುನಾವಣೆ ಈ ಬಾರಿ ಗಮನ ಸೆಳೆದಿತ್ತು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನಿಂದ ಅಶ್ರಫ್ ಸ್ಪರ್ಧೆ ಮಾಡಿದ್ದರು. ಮಂಗಳೂರಿನ ಬಿಜೆಪಿ ಶಾಸಕರು ಮಂಜೇಶ್ವರದಲ್ಲಿ ಠಿಕಾಣಿ ಹೂಡಿದ್ದರು. ಚುನಾವಣೆಯಲ್ಲಿ ಮತೀಯ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಬಂದಿತ್ತು. ಆದರೂ ದೊಡ್ಡ ಪ್ರಮಾಣದ ಮತಗಳ ಅಂತದರಿಂದ ಅಶ್ರಫ್ ಗೆಲುವು ಸಾಧಿಸಿದ್ದರು.

Leave a Comment

Your email address will not be published. Required fields are marked *