ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಡೆದಿರುವ ಸರಣಿ ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಸಾರ್ವಜನಿಕರಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.
ಜೊತೆಗೆ ತಲೆಮರೆಸಿಕೊಂಡಿರುವ ಶಂಕಿತ ಆರೋಪಿಯ ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿದೆ. ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಳಿಪರಂಬು ನಿವಾಸಿಯಾಗಿರುವ ತಂಗಚ್ಚ ಯಾನೆ ಮ್ಯಾಥ್ಯೂ ಯಾನೆ ಬಶೀರ್ ಎಂಬಾತನ ಮೇಲೆ ಪೊಲೀಸರಿಗೆ ತೀವ್ರ ಅನುಮಾನ ವ್ಯಕ್ತವಾಗಿದೆ.
ದಸ್ತಗಿರಿ ವಾರೆಂಟ್ ಬಾಕಿ: ಪೊಲೀಸರ ಮಾಹಿತಿ ಪ್ರಕಾರ, ಈ ಶಂಕಿತ ಆರೋಪಿಯ ವಿರುದ್ಧ ಈಗಾಗಲೇ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಜಾಮೀನುರಹಿತ ದಸ್ತಗಿರಿ ವಾರೆಂಟ್ (NBW) ಜಾರಿಯಾಗಲು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಈತನ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಕರಾವಳಿ ಪೊಲೀಸರು ತೀವ್ರಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳ ತನಿಖೆ ಪ್ರಗತಿಯಲ್ಲಿದ್ದು, ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪರಿಚಿತ ವ್ಯಕ್ತಿಗಳು ಶಂಕಾಸ್ಪದವಾಗಿ ಸಂಚರಿಸುತ್ತಿರುವುದು ಕಂಡುಬಂದಲ್ಲಿ ತಕ್ಷಣವೇ ಜಾಗೃತರಾಗಬೇಕು. ಈ ಶಂಕಿತನ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ ವಿಳಂಬ ಮಾಡದೆ ಸಮೀಪದ ಪೊಲೀಸ್ ಠಾಣೆ ಅಥವಾ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ವಿನಂತಿಸಿದ್ದಾರೆ. ಮಾಹಿತಿ ನೀಡುವ ಸಾರ್ವಜನಿಕರ ವಿವರಗಳನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ಪೊಲೀಸ್ ಇಲಾಖೆ ಭರವಸೆ ನೀಡಿದೆ.
ಸಂಪರ್ಕಿಸಲು ದೂರವಾಣಿ ಸಂಖ್ಯೆಗಳು:ಉಪ್ಪಿನಂಗಡಿ ಪೊಲೀಸ್ ಠಾಣೆ – 08251-251055 / 9480805362 ಬೆಳ್ತಂಗಡಿ ಪೊಲೀಸ್ ಠಾಣೆ – 08256-232093 / 9480805370 ಪುತ್ತೂರು ಪೊಲೀಸ್ ಠಾಣೆ ಉಪನಿರೀಕ್ಷಕರು – 08251-230555 / 9480805361 ದಕ್ಷಿಣ ಕನ್ನಡ ಜಿಲ್ಲಾ ಕಂಟ್ರೋಲ್ ರೂಂ – 9480805300 / 0824-2220500 ಜಿಲ್ಲೆಯಲ್ಲಿ ಇತ್ತೀಚೆಗೆ ಮನೆಗಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಪೊಲೀಸರು ರಾತ್ರಿ ಗಸ್ತು ಹೆಚ್ಚಿಸಿದ್ದು, ಸಾರ್ವಜನಿಕ ಸಹಕಾರವೇ ಪ್ರಕರಣ ಭೇದಿಸಲು ಪ್ರಮುಖವಾಗಿದೆ ಎಂದು ತಿಳಿಸಿದ್ದಾರೆ.






