ಬಂಟ್ವಾಳ: ಚಲಿಸುತ್ತಿದ್ದ ರೈಲಿನಲ್ಲೇ ಮಗುವಿನ ಜನ್ಮ ನೀಡಿದ ಮಹಿಳೆ| ಸಹ ಪ್ರಯಾಣಿಕ ಮಹಿಳೆಯರಿಂದಲೇ ನಡೆಯಿತು ಹೆರಿಗೆ!!

ಸಮಗ್ರ ನ್ಯೂಸ್: ಅಪರೂಪದಲ್ಲೇ ಅಪರೂಪದ ಮತ್ತು ಮಾನವೀಯತೆಯ ದೃಶ್ಯವೊಂದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ರೈಲ್ವೇ ನಿಲ್ದಾಣ ಸಾಕ್ಷಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಯಶವಂತಪುರಕ್ಕೆ ತೆರಳುತ್ತಿದ್ದ ಎಕ್ಸ್‌ಪ್ರೆಸ್‌ ರೈಲಿನಲ್ಲಿ ತುಂಬು ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ಸೂಕ್ತ ವೈದ್ಯಕೀಯ ನೆರವು ಸಿಗದ ಕಾರಣ ಸಹಪ್ರಯಾಣಿಕ ಮಹಿಳೆಯರೇ ದಾದಿಯರಾಗಿ ಬದಲಾಗಿ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.

Ad Widget ... ..

ಮೈಸೂರು ಮೂಲದ ಗರ್ಭಿಣಿಯೊಬ್ಬರು ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ತೆರಳುವ ರೈಲನ್ನೇರಿದ್ದರು. ರೈಲು ಬಿಸಿ ರೋಡ್ ಬಳಿ ತಲುಪುತ್ತಿದ್ದಂತೆ ಮಹಿಳೆಗೆ ತೀವ್ರ ಹೆರಿಗೆ ನೋವು ಹಾಗೂ ರಕ್ತಸ್ರಾವ ಕಾಣಿಸಿಕೊಂಡಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರೈಲ್ವೇ ಸಿಬ್ಬಂದಿ ತಕ್ಷಣವೇ ರೈಲು ಸಂಚಾರವನ್ನು ಬಿಸಿ ರೋಡ್ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.

Ad Widget

ತುರ್ತು ವೈದ್ಯಕೀಯ ಚಿಕಿತ್ಸೆ ನೆರವಿಗಾಗಿ ಸುಮಾರು 30 ನಿಮಿಷಗಳ ಕಾಲ ಕಾಯಲಾಯಿತು. ಆದರೂ ಯಾವುದೇ ವೈದ್ಯಕೀಯ ನೆರವು ಸಕಾಲಕ್ಕೆ ಲಭ್ಯವಾಗಲಿಲ್ಲ. ಸಮಯ ವ್ಯರ್ಥವಾದರೆ ತಾಯಿ-ಮಗುವಿನ ಜೀವಕ್ಕೆ ಅಪಾಯವಿರುವುದನ್ನು ಅರಿತ ರೈಲಿನಲ್ಲಿದ್ದ ಇತರ ಮಹಿಳಾ ಪ್ರಯಾಣಿಕರು ತಕ್ಷಣ ಕಾರ್ಯಪ್ರವೃತ್ತರಾದರು. ರೈಲಿನ ಬೋಗಿಗೆ ಬೆಡ್‌ಶೀಟ್‌ಗಳ ಮೂಲಕ ಪರದೆ ಕಟ್ಟಿ, ತಾತ್ಕಾಲಿಕ ಹೆರಿಗೆ ಕೋಣೆಯನ್ನಾಗಿ ಪರಿವರ್ತಿಸಿದರು.

ಅನುಭವಸ್ಥ ಮಹಿಳೆಯರ ಮಾರ್ಗದರ್ಶನದಲ್ಲಿ ಜತೆಸೇರಿದ ಮಹಿಳೆಯರು ಹರಸಾಹಸ ಪಟ್ಟು ಗರ್ಭಿಣಿಗೆ ಸಹಜ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದರು. ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಮೊದಲ ಅಳು ಕೇಳುತ್ತಿದ್ದಂತೆ ರೈಲಿನಲ್ಲಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ನಂತರ ತಾಯಿ ಮತ್ತು ನವಜಾತ ಶಿಶುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *