ಸಮಗ್ರ ನ್ಯೂಸ್: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಪ್ರಾರ್ಥನಾ ಬಿರಾದಾರ್ ಅವರ ತಂದೆ ನಾಗಪ್ಪ ಬಿರಾದಾರ್ ಸರ್ಕಾರಿ ಶಾಲೆಯ ಶಿಕ್ಷಕ. ಮಗಳನ್ನು ತಮ್ಮ ಶಾಲೆಯಲ್ಲಿಯೇ ಓದಿಸಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸುವಂತೆ ಮಾರ್ಗದರ್ಶನ ಮಾಡಿ ಸಾಕಷ್ಟು ಪೋಷಕರಿಗೆ ಸ್ಫೂರ್ತಿಯಾಗಿದ್ದಾರೆ.
ಮಕ್ಕಳು ಖಾಸಗಿ ಶಾಲೆಯಲ್ಲಿ ಓದಿದರೆ ಮಾತ್ರವೇ ಉತ್ತಮ ಅಂಕ ಗಳಿಸುತ್ತಾರೆ ಎಂಬ ಭ್ರಮೆ ಬಹುತೇಕ ಪೋಷಕರಲ್ಲಿದೆ. ಇನ್ನೂ ಸಾಕಷ್ಟು ಸರ್ಕಾರಿ ನೌಕರರು ಕೂಡ ತಮ್ಮ ಮಕ್ಕಳನ್ನು ದುಬಾರಿ ಶುಲ್ಕ ನೀಡಿ ಖಾಸಗಿ ಶಾಲೆಯಲ್ಲಿ ಓದಿಸುತ್ತಾರೆ. ನೌಕರರು ಮಾತ್ರವಲ್ಲದೇ, ಎಷ್ಟೋ ಸರ್ಕಾರಿ ಶಾಲಾ ಶಿಕ್ಷಕರು ಕೂಡ ತಮ್ಮ ಮಕ್ಕಳನ್ನು ಕಾನ್ವೆಂಟ್ನಲ್ಲಿ ಓದಿಸುತ್ತಿದ್ದಾರೆ. ಇಂತಹವರಿಗೆ ನಾಗಪ್ಪ ಬಿರಾದಾರ್ ಮಾದರಿಯಾಗಿದ್ದಾರೆ.
ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಬಿರಾದಾರ ಅವರದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮ. ಅದೇ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ತಂದೆ ನಾಗಪ್ಪ ಬಿರಾದಾರ್ ಕನ್ನಡ ಶಿಕ್ಷಕರಾಗಿದ್ದಾರೆ. 1 ನೇ ತರಗತಿಯಿಂದಲೂ ಪುತ್ರಿಯನ್ನು ಸರ್ಕಾರಿ ಶಾಲೆಯಲ್ಲಿ ಓದಿಸಿ ಪ್ರೋತ್ಸಾಹಿಸಿದ್ದಾರೆ. ಸದ್ಯ ಪ್ರಾರ್ಥನಾ ಅವರು ಎಸ್ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಗಡಿ ಭಾಗದ ತಾಲೂಕಿನ ಪ್ರೌಢಶಾಲೆಯಲ್ಲಿ ರ್ಯಾಂಕ್ ಬಂದಿರುವುದು ಸಂತಸ ತಂದಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.







