ರಸ್ತೆ ಗುಂಡಿಗಳನ್ನು ಮುಚ್ಚಲು ದುಬಾರಿ ಪೋರ್ಷೆ ಕಾರಿನಲ್ಲಿ ಸಿಮೆಂಟ್ ಕಲಸಿದ ಉದ್ಯಮಿ

ಸಮಗ್ರ ನ್ಯೂಸ್: ಬೆಂಗಳೂರಿನ ಟ್ರಾಫಿಕ್ ಮತ್ತು ರಸ್ತೆ ಗುಂಡಿಗಳ ಸಮಸ್ಯೆ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ರಸ್ತೆ ಗುಂಡಿಗಳನ್ನು ಮುಚ್ಚಲು ಜನರು ಕಂಡುಕೊಳ್ಳುವ ದಾರಿಗಳು ಮಾತ್ರ ಕೆಲವೊಮ್ಮೆ ಅಚ್ಚರಿ ಮೂಡಿಸುತ್ತವೆ. ಇತ್ತೀಚೆಗೆ ಬೆಂಗಳೂರಿನ ಉದ್ಯಮಿಯೊಬ್ಬರು ರಸ್ತೆ ಗುಂಡಿಯನ್ನು ಮುಚ್ಚಲು ತಮ್ಮ ದುಬಾರಿ ಪೋರ್ಷೆ ಕಾರನ್ನು ಬಳಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

Ad Widget ... ..

ಅಖಿಲ್ ಹೇಮಾದ್ರಿ ಎಂಬುವವರು ಇಂತಹ ಅಚ್ಚರಿಯ ಕೆಲಸಕ್ಕೆ ಕೈಹಾಕಿದ ಯುವಕ. ರಸ್ತೆಯಲ್ಲಿದ್ದ ಗುಂಡಿಯನ್ನು ನೋಡಿ ಬೇಸತ್ತ ಅವರು, ತಮ್ಮ ಕೆಂಪು ಬಣ್ಣದ ಐಷಾರಾಮಿ ಪೋರ್ಷೆ ಕಾರಿನ ಬಾನೆಟ್ ಮೇಲೆ ನೇರವಾಗಿ ಸಿಮೆಂಟ್, ನೀರು ಮತ್ತು ಜಲ್ಲಿಯನ್ನು ಹಾಕಿ ಕಲಸಿದ್ದಾರೆ. ಬಳಿಕ ಆ ಮಿಶ್ರಣವನ್ನು ಬಳಸಿ ರಸ್ತೆಯಲ್ಲಿದ್ದ ಗುಂಡಿಯನ್ನು ಮುಚ್ಚಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆಯ ಕಾರಿನ ಮೇಲೆ ಹೀಗೆ ಸಿಮೆಂಟ್ ಕಲಸುತ್ತಿರುವುದನ್ನು ಕಂಡು ಜನ ದಂಗಾಗಿದ್ದಾರೆ.

Ad Widget

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ನಮ್ಮದು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ, ಪ್ರತಿಯೊಂದಕ್ಕೂ ಕೇವಲ ಸರ್ಕಾರವನ್ನೇ ನಂಬಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ನಾವು ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಇದು ನಮ್ಮ ಜೀವನದ ಮೇಲಿರುವ ಗಂಭೀರತೆಯನ್ನು ಮತ್ತು ಬದ್ಧತೆಯನ್ನು ತೋರಿಸುತ್ತದೆ ಎಂದು ಅವರು ಈ ಘಟನೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಆದರೆ, ಈ ಘಟನೆಯಲ್ಲಿ ಒಂದು ಅಚ್ಚರಿಯ ತಿರುವು ಕೂಡ ಇದೆ. ಗುಂಡಿ ಮುಚ್ಚಿದ ಬಳಿಕ ಅಖಿಲ್ ಅವರು ತಮ್ಮ ಕಾರಿನ ಮೇಲಿದ್ದ ಪೇಂಟ್ ಪ್ರೊಟೆಕ್ಷನ್ ಫಿಲ್ಮ್ (ಪಿಪಿಎಫ್) ಪದರವನ್ನು ಸುಲಭವಾಗಿ ತೆಗೆಯುತ್ತಾರೆ. ಆ ಮೂಲಕ ತಮ್ಮ ದುಬಾರಿ ಕಾರಿನ ಮೂಲ ಬಣ್ಣಕ್ಕೆ ಯಾವುದೇ ಹಾನಿಯಾಗಿಲ್ಲ ಎಂಬುದನ್ನು ಪ್ರದರ್ಶಿಸಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇವರ ಸಾಮಾಜಿಕ ಕಳಕಳಿಯನ್ನು ಮೆಚ್ಚಿದ್ದಾರೆ. ರಸ್ತೆ ಗುಂಡಿಗಳ ನಿರ್ವಹಣೆಯಲ್ಲಿ ವ್ಯವಸ್ಥೆಯ ವೈಫಲ್ಯವನ್ನು ಈ ಮೂಲಕ ಎತ್ತಿ ತೋರಿಸಲಾಗಿದೆ ಎಂದು ಬೆಂಬಲಿಸಿದ್ದಾರೆ. ಆದರೆ ಮತ್ತೆ ಕೆಲವರು, ಇದು ಕೇವಲ ತಮ್ಮ ಕಾರ್ ಡಿಟೇಲಿಂಗ್ ಕಂಪನಿಯ ಪೇಂಟ್ ಪ್ರೊಟೆಕ್ಷನ್ ಫಿಲ್ಮ್ ಪ್ರಚಾರಕ್ಕಾಗಿ ಮಾಡಿದ ಮಾರ್ಕೆಟಿಂಗ್ ತಂತ್ರ ಎಂದು ಟೀಕಿಸಿದ್ದಾರೆ.

ಪ್ರಚಾರದ ಉದ್ದೇಶ ಏನೇ ಇದ್ದರೂ, ಈ ಘಟನೆ ಬೆಂಗಳೂರಿನ ರಸ್ತೆಗಳ ದುರವಸ್ಥೆ ಮತ್ತು ನಾಗರಿಕರ ಮತ್ತು ಸರ್ಕಾರದ ಜವಾಬ್ದಾರಿಯ ಬಗ್ಗೆ ಮತ್ತೊಮ್ಮೆ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ ಎಂಬುದಂತೂ ಸತ್ಯ.

Leave a Comment

Your email address will not be published. Required fields are marked *