ಸಮಗ್ರ ನ್ಯೂಸ್: ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಟೆಲಿಕಾಂ ಕಂಪನಿಗಳಿಗೆ ಕೇವಲ ವಾಯ್ಸ್ ಕಾಲಿಂಗ್ ಮತ್ತು ಎಸ್‌ಎಂಎಸ್ ಸೌಲಭ್ಯಗಳಿರುವ ಅಗ್ಗದ ಪ್ಲಾನ್‌ಗಳನ್ನು ಕಡ್ಡಾಯವಾಗಿ ನೀಡಲು ನಿರ್ದೇಶಿಸಿದೆ.
ಟೆಲಿಕಾಂ ಕಂಪನಿಗಳು ಇನ್ನು ಮುಂದೆ ಕೇವಲ ವಾಯ್ಸ್ ಕಾಲಿಂಗ್ (Voice Calling) ಮತ್ತು ಎಸ್‌ಎಂಎಸ್ (SMS) ಸೌಲಭ್ಯಗಳನ್ನು ಮಾತ್ರ ಒಳಗೊಂಡಿರುವ ಕಡಿಮೆ ಬೆಲೆಯ ಮೊಬೈಲ್ ಪ್ಲಾನ್‌ಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ನಿರ್ದೇಶನ ನೀಡಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹೆಚ್ಚಿನ ರೀಚಾರ್ಜ್ ಪ್ಲಾನ್‌ಗಳಲ್ಲಿ ಡೇಟಾ (Data) ಪ್ಯಾಕ್ ಕಡ್ಡಾಯವಾಗಿ ಸೇರಿರುತ್ತದೆ. ಇಂಟರ್ನೆಟ್ ಬಳಸದ ಗ್ರಾಹಕರು ಕೂಡ ಈ ಡೇಟಾಕ್ಕಾಗಿ ಅನಗತ್ಯವಾಗಿ ಹಣ ತೆರಬೇಕಾದ ಪರಿಸ್ಥಿತಿ ಇದೆ. ಇದನ್ನು ತಪ್ಪಿಸುವುದೇ ಟ್ರಾಯ್‌ನ ಮುಖ್ಯ ಉದ್ದೇಶವಾಗಿದೆ.
ದೇಶದಲ್ಲಿ ಸುಮಾರು 15 ಕೋಟಿಗೂ ಹೆಚ್ಚು ಮೊಬೈಲ್ ಬಳಕೆದಾರರು ಇನ್ನೂ 2ಜಿ (2G) ಸೇವೆಯನ್ನೇ ಬಳಸುತ್ತಿದ್ದಾರೆ. ಇವರು ಇಂಟರ್ನೆಟ್ ಬಳಸುವುದೇ ಇಲ್ಲ. ಇಂತಹ ಗ್ರಾಹಕರಿಗೆ ಈ ಹೊಸ ಅಗ್ಗದ ಪ್ಲಾನ್‌ಗಳು ಹೆಚ್ಚಿನ ಆರ್ಥಿಕ ನೆಮ್ಮದಿ ನೀಡಲಿವೆ.
ಟ್ರಾಯ್ ನಡೆಸಿದ ಸಮೀಕ್ಷೆಯಲ್ಲಿ, ಕೇವಲ ಕರೆ ಮಾಡಲು ಬಯಸುವ ಸಾಮಾನ್ಯ ಗ್ರಾಹಕರು ಡೇಟಾಕ್ಕಾಗಿ ಹೆಚ್ಚುವರಿ ಹಣ ಪಾವತಿಸುತ್ತಿರುವುದು ಕಂಡುಬಂದಿದೆ. ಗ್ರಾಹಕರ ಈ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ಟ್ರಾಯ್ ಈ ತಿದ್ದುಪಡಿಯನ್ನು ಜಾರಿಗೆ ತರುತ್ತಿದೆ.
2012ರ ಟೆಲಿಕಾಂ ಗ್ರಾಹಕ ಸಂರಕ್ಷಣಾ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಟ್ರಾಯ್ ಈ ನಿರ್ದೇಶನ ನೀಡಿದೆ. ಈ ಹಿಂದೆ 2024ರಲ್ಲೂ ಇದೇ ರೀತಿಯ ಸೂಚನೆಯನ್ನು ನೀಡಲಾಗಿತ್ತು. ಇದೀಗ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಟೆಲಿಕಾಂ ಕಂಪನಿಗಳಿಗೆ ಸೂಚಿಸಲಾಗಿದೆ.







