ಸಮಗ್ರ ನ್ಯೂಸ್: ಇರಾನ್ ಮೇಲೆ ನಡೆಯುತ್ತಿರುವ ಬಾಂಬ್ ದಾಳಿ ಹಾಗೂ ಮಿಲಿಟರಿ ಕಾರ್ಯಾಚರಣೆಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಶ್ವೇತಭವನದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಈ ಬಗ್ಗೆ CNN ವರದಿ ಮಾಡಿದೆ. ಇಸ್ರೇಲ್ ನ ಸರಕಾರಿ ಮಾಧ್ಯಮ ‘ಕಾನ್’ ಕೂಡ ಇಸ್ರೇಲ್ ಕದನ ವಿರಾಮಕ್ಕೆ ಸಮ್ಮತಿಸಿದೆ ಎಂದು ತಿಳಿಸಿದೆ.
ಇಸ್ರೇಲ್ ಕೂಡ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂಬ ಮಾಹಿತಿ ಅಮೆರಿಕ ಹಾಗೂ ಇಸ್ರೇಲ್ ಮಾಧ್ಯಮ ವರದಿಗಳಲ್ಲಿ ಪ್ರಕಟವಾಗಿದೆ.
ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಗಳ ಬಳಿಕ ಫಲಪ್ರದವಾದ ಎರಡು ವಾರಗಳ ಕದನ ವಿರಾಮ ಒಪ್ಪಂದಕ್ಕೆ ಇರಾನ್ ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ ಅನುಮೋದನೆ ನೀಡಿದೆ ಎಂದು Aljazeera ವರದಿ ಮಾಡಿದೆ.
ಮೆಹರ್ ಸುದ್ದಿ ಸಂಸ್ಥೆ ಪ್ರಕಟಿಸಿದ ಹೇಳಿಕೆಯ ಪ್ರಕಾರ, ಇರಾನ್ ನ ನೂತನ ಸುಪ್ರೀಂ ನಾಯಕ ಆಯತೊಲ್ಲಾ ಮೊಜ್ತಬಾ ಖಾಮಿನೈ ಅವರ ಅನುಮೋದನೆಯೊಂದಿಗೆ ಈ ಒಪ್ಪಂದ ಅಂತಿಮಗೊಂಡಿದೆ.
ಈ ಕದನ ವಿರಾಮವನ್ನು “ಇರಾನ್ ಗೆ ದೊರೆತ ಗೆಲುವು” ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ. ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯಲ್ಲಿ ಇದು ಮಹತ್ವದ ಬೆಳವಣಿಗೆ ಎಂದು ಮಂಡಳಿ ತಿಳಿಸಿದೆ.
ಮುಂದಿನ ದಿನಗಳಲ್ಲಿ ಶಾಶ್ವತ ಕದನ ವಿರಾಮ ಒಪ್ಪಂದ ಸಾಧಿಸಲು ಮಾತುಕತೆಗಳನ್ನು ಮುಂದುವರಿಸಲಾಗುವುದು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.







