ಸಮಗ್ರ ನ್ಯೂಸ್: ಮಾರ್ಚ್ ತಿಂಗಳ ಕೊನೆಯ ವಾರದಲ್ಲಿದ್ದೇವೆ. ಈ ವಾರ ಯಾವ ರಾಶಿಯ ಫಲ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ 12 ರಾಶಿಗಳ ಸುಖ, ದುಃಖ, ಆರೋಗ್ಯ, ಹಣಕಾಸು, ಆರ್ಥಿಕ, ಪ್ರೇಮ, ಕೌಟುಂಬಿಕ, ಸಾಮಾಜಿಕ, ಆರೋಗ್ಯ ಹಾಗೂ ವೃತ್ತಿ ಜೀವನ ಸೇರಿದಂತೆ ಎಲ್ಲಾ ವಿಷಯಗಳು ಹೇಗೆ ಇರಲಿವೆ ಎಂದು ತಿಳಿಯೋಣ.
ಮೇಷ: ಮೇಷ ರಾಶಿಗೆ ದ್ವಾದಶದಲ್ಲಿ ರವಿ, ಶನಿಯಿದ್ದು ಹಾಗೂ ಶನಿ ಸಂಚಾರ ಕಾಲದಲ್ಲಿ ಸಮಯಕ್ಕೆ ಕೆಲಸಗಳು ಆಗದಿರುವುದು ಚಿಂತೆಗೀಡು ಮಾಡುತ್ತದೆ. ಗುರುವು ತೃತೀಯದಲ್ಲಿದ್ದು, ಶುಕ್ರನು ಲಗ್ನದಲ್ಲಿ ಇರುವುದರಿಂದ ವಾರಾಹಿಯನ್ನು ಪೂಜಿಸಿದರೆ ನಿಮ್ಮ ಕೆಲಸಗಳು ಒಂದು ಮಟ್ಟವನ್ನು ಮುಟ್ಟಲು ಸಾಧ್ಯವಾಗುತ್ತದೆ. ರಾಶ್ಯಾಧಿಪತಿ ಸುಬ್ರಹ್ಮಣ್ಯ ದೇವರನ್ನು ನಿರಂತರವಾಗಿ ಪ್ರಾರ್ಥಿಸಿ, ಪೂಜಿಸಿ, ದೇವರ ಸಹಾಯವಿಲ್ಲದೆ ಯಾವ ಕೆಲಸಗಳೂ ಕೈಗೂಡಿ ಇಷ್ಟಾರ್ಥ ಕಂಡುಕೊಳ್ಳಲು ಸಾಧ್ಯವಾಗದು.
ವೃಷಭ: ದ್ವಾದಶದಲ್ಲಿ ಶುಕ್ರನಿದ್ದು, ಖರ್ಚು ಆದಾಯಕ್ಕಿಂತ ಜಾಸ್ತಿ ಇರುತ್ತದೆ. ನಿಮ್ಮ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿ ಕೈಯಲ್ಲಿ ದುಡ್ಡು ನಿಲ್ಲುವುದು ಕಷ್ಟ ಸಾಧ್ಯವಾಗುತ್ತದೆ. ಆದರೂ ಗುರುವು ದ್ವಿತೀಯದಲ್ಲಿರುವುದರಿಂದ ದೇವರ ಮೇಲೆ ಭಾರಹಾಕಿ. ಶ್ರೀನಿವಾಸ ಗುಡಿಗೆ ಹೋಗಿ ಪ್ರಾರ್ಥಿಸಿ ಬನ್ನಿ. ಶುಭವಾಗುತ್ತದೆ.
ಮಿಥುನ:
ಮಿಥುನ ರಾಶಿಯಲ್ಲಿ ಹುಟ್ಟಿದ ನೀವು ಪುನರ್ವಸು ನಕ್ಷತ್ರದಲ್ಲಿ ಜನಿಸಿರುವ ಶ್ರೀರಾಮಚಂದ್ರನನ್ನು ಪೂಜಿಸಲೇಬೇಕು. 3ರಲ್ಲಿ ಕೇತುವು ಇರುವುದರಿಂದ ಇಷ್ಟಾರ್ಥ ಸಿದ್ದಿಸಲು ಗಣನಾಯಕನನ್ನು ಪ್ರಾರ್ಥಿಸಿ. ಹಲವಾರು ವಿಘ್ನಗಳು ಕಂಡೂಕಾಣದಂತೆ ಬಂದು ನಿಮ್ಮನ್ನು ಹಣ್ಣಾಗಿಸುತ್ತದೆ. ಅದಕ್ಕೆ ಪರಿಹಾರ ಹನುಮಾನ್ ದರ್ಶನ ಹಾಗೂ ಹನುಮಾನ್ ಚಾಲೀಸ್ ಪಠಿಸಿ.
ಕಟಕ:
ದ್ವಾದಶ ಗುರುವು ದೇಹಕ್ಕೆ ಅತಿಯಾದ ಆಲಸ್ಯ ಉಂಟುಮಾಡಿ ನಿಮ್ಮ ಕೆಲಸವು ಮಂದಗತಿಯಲ್ಲಿ ಸಾಗುವುದು. ಸೂರ್ಯನಾರಾಯಣ ಅಷ್ಟಕವನ್ನು ಪಠಿಸಿದರೆ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ. ಗುರುವು ತನ್ನ ಸ್ಥಾನವನ್ನು ಬದಲಾಯಿಸುವವರೆಗೆ ಸೂರ್ಯನಾರಾಯಣ ಅಷ್ಟೋತ್ತರ, ಈಶ್ವರ ಅಷ್ಟೋತ್ತರವನ್ನು ಪಠಿಸಿದರೆ ಒಳ್ಳೆಯದು.
ಸಿಂಹ:
ಏಕಾದಶದಲ್ಲಿ ಗುರುವಿದ್ದರೂ ಅಷ್ಟಮ ಶನಿಯಿಂದಾಗಿ ಇಟ್ಟುಕೊಂಡ ಗುರಿ ಮುಟ್ಟಲಾಗುವುದಿಲ್ಲ. ಮಾರ್ಗ ತಪ್ಪುತ್ತದೆ. ಅವಲಂಬನೆ ಜಾಸ್ತಿಯಾಗಿ ಮನಸ್ಸಿಗೆ ಉದ್ವೇಗ ಉಂಟಾಗುತ್ತದೆ. ಕೆಲವೊಮ್ಮೆ ಶರೀರದ ಆಲಸ್ಯ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಸೂರ್ಯನೇ ಈ ರಾಶಿಗೆ ಅಧಿಪತಿ. ಸೂರ್ಯನನ್ನು ಪ್ರಾರ್ಥಿಸಿ, ಇಷ್ಟಾರ್ಥ ಸಿದ್ಧಿಸಿಕೊಳ್ಳಿ.
ಕನ್ಯಾ:
ಕನ್ಯಾ ರಾಶಿಗೆ ಸಪ್ತಮದಲ್ಲಿ ಪಾಪಗ್ರಹಗಳು, ಅಷ್ಟಮದಲ್ಲಿ ಶುಕ್ರನಿದ್ದು, ಒಟ್ಟಾರೆ ಎಲ್ಲಾ ಕಡೆಯಿಂದ ಸಾಂಸಾರಿಕ ತಾಪತ್ರಯ, ಹಣದ ಕೊರತೆ ಉಂಟಾಗುತ್ತದೆ. ಉಪಾಯದಿಂದ ಈ ಸಮಯವನ್ನು ದಾಟಬೇಕು. ದೈವಬಲವೇ ನಿಮ್ಮನ್ನು ಕಾಪಾಡಲಿ. ನಿಮ್ಮ ಕುಲದೇವರು ಕೈಹಿಡಿದು ನಡೆಸಲಿ.
ತುಲಾ:
ತುಲಾ ರಾಶಿಯವರಿಗೆ ಸಮಯವು ಅತ್ಯಂತ ಅನುಕೂಲಕರವಾಗಿದ್ದು, ಲಾಭವೂ ಇದೆ, ಸಂತೋಷವೂ ಇದೆ. ಜನಾನುರಾಗಿಯೂ ಆಗುತ್ತೀರ. ಎಲ್ಲವೂ ಸೇರಿ ಸಾಹಸಿಯಾಗಿ ದೈವಕೃಪೆಯಿಂದ ಹಿಡಿದ ಕೆಲಸವನ್ನು ಮಾಡುವ ಸಮಯವಿದು. ದೋಣಿ ಸಾಗಲಿ ಮುಂದೆ ಹೋಗಲಿ, ನಿಮಗೆ ದೈವಕೃಪೆ ಸದಾ ಇರಲಿ.
ವೃಶ್ಚಿಕ:
ವೃಶ್ಚಿಕ ರಾಶಿಯವರಿಗೆ ಆತಂಕದ ಸಮಯವಲ್ಲ. ನಿರ್ದಿಷ್ಟ ಕೆಲಸವನ್ನು ಸಮಯಪ್ರಜ್ಞೆ, ಕರ್ತವ್ಯ ಪ್ರಜ್ಞೆಯಿಂದ ಮಾಡಿದರೆ ಎಲ್ಲವನ್ನೂ ಗೆಲ್ಲಬಹುದು. ಪಂಚಮದಲ್ಲಿ ಶನಿ, ಅಷ್ಟಮದಲ್ಲಿ ಗುರುವಿದ್ದರೂ ಸುಬ್ರಹ್ಮಣ್ಯನ ಪ್ರಾರ್ಥನೆಯಿಂದ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತದೆ. ಸುಬ್ರಹ್ಮಣ್ಯ ದೇವರ ಮೂಲ ಮಂತ್ರ ಜಪಿಸಿ, ಅಷ್ಟೋತ್ತರ ಪಠಿಸಿ.
ಧನಸ್ಸು:
ಸಪ್ತಮ ಗುರು ಕೆಲಸವನ್ನು ಮಾಡಬೇಕೆಂದುಕೊಂಡರೂ ಚತುರ್ಥ ಶನಿಯು ಬಿಡನು. ಮಾತು ಕೇಳಿಸಿಕೊಳ್ಳುವವನೇ ನಾಯಕ. ಯಾರನ್ನೇ ಗೆಲ್ಲಬೇಕಾದರೂ ಸಂದರ್ಭ ಅರಿತು ಸೂಕ್ತ ಸಮಯಕ್ಕಾಗಿ ಕಾಯಬೇಕು. ಈ ವಾರದ ಅತ್ಯುತ್ತಮ ಸಲಹೆ. ದುಡುಕಬೇಡಿ. ಧೈರ್ಯಗೆಡಬೇಡಿ. ಗುರುಬಲವೇ ನಿಮ್ಮನ್ನು ಅತ್ಯುತ್ತಮ ಸುಖದ ಹಾದಿಯಲ್ಲಿ ಕರೆದುಕೊಂಡು ಹೋಗುತ್ತಾನೆ.
ಮಕರ: ಮೂರರಲ್ಲಿ ಶನಿಯು ಬೇಕಾದ್ದನ್ನು ಕೊಡುತ್ತಾನೆ. ಗುರುಬಲ ಇಲ್ಲದೆ ಇರುವುದರಿಂದ ಗಣಪತಿಯನ್ನು ಮಾಡಿರೆಂದರೆ ಅವರ ಅಪ್ಪನನ್ನು ಮಾಡುತ್ತೀರ. ಗುರುವನ್ನು ಪೂಜಿಸಿ, ಅವರ ಆಶೀರ್ವಾದ ಪಡೆದು ಮುಂದೆ ಸಾಗಿ ಕಾರ್ಯೋನ್ಮುಖರಾಗಲು ಸಾಧ್ಯವಾಗುತ್ತದೆ. ದಕ್ಷಿಣಾಮೂರ್ತಿಯ ಆರಾಧನೆಯನ್ನು ಮಾಡಿರಿ.
ಕುಂಭ:
ಕುಂಭ ರಾಶಿಯವರಿಗೆ ಲಗ್ನದಲ್ಲಿ ಕುಜ-ರಾಹು ಇದ್ದು, ಯಾವುದೇ ವ್ಯಾಪಾರ, ನೆನೆಸಿದ ಧನವೂ ಬರುವುದಿಲ್ಲ. ಅದಕ್ಕೆ ಶನಿಸಂಚಾರವೂ ಕೂಡಿದೆ. ಆದರೆ ಪಂಚಮದಲ್ಲಿ ಗುರುವಿದ್ದು, ಆಕಸ್ಮಿಕವಾಗಿ ಕೊನೆ ಕ್ಷಣದಲ್ಲಿ ಕೆಲಸಗಳು ನಿಮ್ಮಂತೆ ಆಗುತ್ತವೆ. ಗುರುವಿಗೆ ಕಡಲೆಬೇಳೆ ದಾನನೀಡಿ. ಪ್ರತಿ ಗುರುವಾರದಂದು ಸತ್ಯನಾರಾಯಣ ದೇವರಲ್ಲಿ ಪ್ರಾರ್ಥನೆ ಇರಿಸಿ 9 ನಮಸ್ಕಾರ ಹಾಕಿರಿ. ನಿಮ್ಮ ಕಾರ್ಯವು ಈಡೇರುತ್ತದೆ.
ಮೀನ ರಾಶಿ:
ನಾಲ್ಕರಲ್ಲಿ ಗುರು, ದ್ವಾದಶದಲ್ಲಿ ಕುಜ, ರಾಹುವಿದ್ದರೂ ಗುರು ರಾಶಿಯಲ್ಲಿ ಜನಿಸಿದ ನಿಮಗೆ ಗುರು ಎಲ್ಲಿದ್ದರೂ ಸತ್ಪಲ ನೀಡುತ್ತಾನೆ. ನೀವು ಈ ಶನಿಸಂಚಾರದ ಸಮಯದಲ್ಲಿ ಸತ್ಯದ ಬೆಳಕಿನಲ್ಲಿ ಸಾಗಿದರೆ, ದೇವರೇ ತೇಜೋಮಯವಾದ ಬೆಳಕನ್ನು, ಸಂತೋಷವನ್ನು ಆರೋಗ್ಯವನ್ನು ಕೊಟ್ಟು ಹರಸುತ್ತಾನೆ. ಗುರು-ಶನಿ ಅಷ್ಟೋತ್ತರ ಪಠಿಸಿ. ತಿಲಾದಾನವನ್ನು ಸೋಮವಾರದಂದು ಮಾಡಿದರೆ ಒಳ್ಳೆಯದಾಗುತ್ತದೆ.







