ಸಮಗ್ರ ನ್ಯೂಸ್: ಭಾರತದಲ್ಲಿ ಮತ್ತೊಮ್ಮೆ ಹಕ್ಕಿ ಜ್ವರ ಭೀತಿ ಜನರಲ್ಲಿ ಆತಂಕ ಮೂಡಿಸಿದೆ. ಕೇರಳದಲ್ಲಿ ಕೆಲವು ಶಂಕಿತ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡಿದೆ. ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಹಕ್ಕಿ ಜ್ವರ ಹರಡುವ ಸಾಧ್ಯತೆ ಇರುವುದರಿಂದ, ವಿಶೇಷವಾಗಿ ಕೋಳಿ ಸಾಕಣೆ ಕೇಂದ್ರಗಳು, ಕೋಳಿ ಮಾರುಕಟ್ಟೆಗಳು ಹಾಗೂ ಕೋಳಿ ಸಂಸ್ಕರಣೆ ಘಟಕಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಆರೋಗ್ಯ ಪ್ರೋಟೋಕಾಲ್‌ಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ. ಈ ವಲಯದಲ್ಲಿ ಕೆಲಸ ಮಾಡುವವರಲ್ಲಿ ಶಂಕಿತ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಐಸೋಲೇಷನ್‌ಗೆ ಒಳಗಾಗಬೇಕು ಎಂದು ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ.
ಇನ್ನೊಂದೆಡೆ, ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಕೂಡ ಹಕ್ಕಿ ಜ್ವರದ ಶಂಕಿತ ಪ್ರಕರಣಗಳು ಕಂಡುಬಂದಿರುವುದರಿಂದ ರಾಜ್ಯ ಸರ್ಕಾರ ಅಲರ್ಟ್ ಘೋಷಿಸಿದೆ. ಪಶುಸಂಗೋಪನಾ ಇಲಾಖೆ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದು, ಸೋಂಕು ಹರಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾರ್ವಜನಿಕರಲ್ಲಿ ಆತಂಕಕ್ಕಿಂತ ಜಾಗೃತಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಸೂಚನೆಗಳನ್ನು ನೀಡಿದ್ದು, ಅಗತ್ಯವಿದ್ದಲ್ಲಿ ಹೆಚ್ಚಿನ ನಿರ್ಬಂಧಾತ್ಮಕ ಕ್ರಮಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







