ಸಮಗ್ರ ನ್ಯೂಸ್: ಅಕ್ರಮ ಗೋಸಾಗಾಟ ಪ್ರಕರಣಕ್ಕೆ ಕುರಿತಂತೆ ಇದೀಗ ದಕ್ಷಿಣಕನ್ನಡ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೀಗ ಆರೋಪಿಯ ಮನೆ ಮತ್ತು ಕೊಟ್ಟಿಗೆಯನ್ನು ಜಪ್ತಿ ಮಾಡಿದ್ದಾರೆ.
ದಿನಾಂಕ 13-12-2025 ರಂದು ಸಂಜೆ, ಬಂಟ್ವಾಳ ಉಳಿ ಗ್ರಾಮದ ಮಣಿನಾಲ್ಕೂರು- ತೆಕ್ಕಾರು ರಸ್ತೆಯಲ್ಲಿ ಗೂಡ್ಸ್ ಅಟೋದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ತೆರಳಿ, KA-70-8686 ನೇ ನೊಂದಣಿಯ ಸದ್ರಿ ಗೂಡ್ಸ್ ಅಟೋವನ್ನು ತಡೆದು ಪರಿಶೀಲಿಸಿದಾಗ, ಅದರಲ್ಲಿ ಒಂದು ಜಾನುವಾರನ್ನು ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಕಂಡು ಬಂದಿರುತ್ತದೆ.
ವಾಹನದ ಚಾಲಕರಲ್ಲಿ ಈ ಬಗ್ಗೆ ವಿಚಾರಿಸಿದಾಗ, ಅತನು ಬಂಟ್ವಾಳ ಮಣಿನಾಲ್ಕೂರು ಗ್ರಾಮದ ನಿವಾಸಿ ಶ್ರೀಧರ ಪೂಜಾರಿ(56) ಎಂಬುದಾಗಿ ತಿಳಿಸಿದ್ದು, ಬಂಟ್ವಾಳ ಸರಪ್ಪಾಡಿ ಎಂಬಲ್ಲಿ ಭೋಜ ಮೂಲ್ಯ ಎಂಬವರ ಮನೆಯಿಂದ ಯಾವುದೇ ದಾಖಲಾತಿ ಪರವಾನಿಗೆ ಇಲ್ಲದೇ ಎಲ್ಲಿಯೋ ಗೋಹತ್ಯೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಜಾನುವಾರನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡಿರುವುದು ಕಂಡುಬಂದಿರುತ್ತದೆ. ಮುಂದಿನ ಕಾನೂನುಕ್ರಮಕ್ಕಾಗಿ ಸದ್ರಿ ಜಾನುವಾರು, ಅಟೋ ಹಾಗು ಒಂದು ಮೊಬೈಲ್ ಫೋನ್ ನ್ನು ವಶಕ್ಕೆ ಪಡೆದು, ಅರೋಪಿಗಳ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇದೀಗ ಆರೋಪಿತ ಭೋಜ ಮೂಲ್ಯ ರವರ ಮನೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಜಾನುವಾರು ಕೊಟ್ಟಿಗೆ ಸೇರಿದಂತೆ ಆವರಣವನ್ನು ಕಾನೂನು ಪ್ರಕ್ರಿಯೆಯಂತೆ ಜಪ್ತಿ ಮಾಡಲಾಗಿರುತ್ತದೆ.






