ಸಮಗ್ರ ನ್ಯೂಸ್: ಪ್ರಸಿದ್ಧ ವಾರ್ಷಿಕ ಶಬರಿಮಲೆ ಅಯ್ಯಪ್ಪನ ‘ಮಂಡಲ ಮಕರವಿಳಕ್ಕು’ ಯಾತ್ರೆ ಆರಂಭವಾದ 2ನೇ ದಿನವೇ ಭಾರಿ ಅವ್ಯವಸ್ಥೆ ಉಂಟಾಗಿದ್ದು, 48 ಗಂಟೆಯಲ್ಲಿ ಕರ್ನಾಟಕದ ಭಕ್ತರು ಸೇರಿ 2 ಲಕ್ಷ ಭಕ್ತರು ಆಗಮಿಸಿದ ಕಾರಣ ನೂಕುನುಗ್ಗಲಿನ ವಾತಾವರಣ ಸೃಷ್ಟಿಯಾಗಿದೆ. ಈ ವೇಳೆ ಸರದಿಯಲ್ಲಿ ನಿಂತಿದ್ದ 58 ವರ್ಷದ ಮಹಿಳಾ ಭಕ್ತರೊಬ್ಬರು ಸಾವನ್ನಪ್ಪಿದ್ದಾರೆ.
ದೇವಸ್ಥಾನದ ಬಾಗಿಲು ತೆರೆದ ಎರಡೇ ದಿನದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಆಗಮಿಸಿದ ಭಕ್ತರನ್ನು ನಿಯಂತ್ರಿಸಲು ತಿರುವಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮತ್ತು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಕೊರೆಯುವ ಚಳಿಯ ನಡುವೆಯೂ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಅಯ್ಯಪ್ಪನ ಸನ್ನಿಧಿಯ 18 ಮೆಟ್ಟಿಲುಗಳನ್ನು ಹತ್ತುವ ಪ್ರದೇಶದಲ್ಲಿ ಭಾರೀ ನೂಕುನುಗ್ಗಲು ಉಂಟಾಗಿದೆ.
ದರ್ಶನ ಪಡೆಯಲು 10 ತಾಸಿಗೂ ಹೆಚ್ಚಿನ ಅವಧಿ ಹಿಡಿಯುತ್ತಿದೆ. ಹೀಗಾಗಿ ಹಲವು ಭಕ್ತರು ದರ್ಶನ ಸಾಧ್ಯವಾಗದೆ ಪಂಪಾದಲ್ಲಿ ತುಪ್ಪದ ಸೇವೆ ಸಲ್ಲಿಸಿ ವಾಪಸಾಗುತ್ತಿರುವ ವರದಿಗಳೂ ಕೇಳಿಬಂದಿವೆ. ಸಾಮಾನ್ಯವಾಗಿ ನಿತ್ಯ 90 ಸಾವಿರ ಮಂದಿಗಷ್ಟೇ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಈ ಬಾರಿ ಮಿತಿ ಮೀರಿದ ಸಂಖ್ಯೆಯಲ್ಲಿ ಭಕ್ತರು ಆಗಮಿಸಿರುವುದರಿಂದ ದೇವಸ್ಥಾನದ ಆಡಳಿತವು ಅಗತ್ಯ ಸೌಲಭ್ಯ ಕಲ್ಪಿಸಲು ಪರದಾಡುತ್ತಿದೆ.
ಬೆಟ್ಟದ ತಪ್ಪಲಿನ ಪಂಬಾದಿಂದ ಸನ್ನಿಧಾನದ ವರೆಗಿನ ದಾರಿ ಭಕ್ತರಿಂದ ಕಿಕ್ಕಿರಿದು ತುಂಬಿದೆ. ಇಲ್ಲಿ 3-4 ಗಂಟೆ ಸರದಿಯಲ್ಲಿ ನಿಲ್ಲಬೇಕಾದ ಸ್ಥಿತಿ ಇದೆ. ಈ ನಡುವೆ, ಹಲವು ಭಕ್ತರು ನೀರು ಸೇರಿ ಅಗತ್ಯ ಮೂಲಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಶೌಚಾಲಯಗಳು ಶುಚಿಯಾಗಿಲ್ಲ ಎಂಬ ಆಕ್ರೋಶವೂ ಹೆಚ್ಚಾಗಿದೆ.
ಈ ನಡುವೆ ಸರದಿಯಲ್ಲಿ ನಿಂತಿದ್ದ ಕಲ್ಲಿಕೋಟೆ ಮೂಲದ ಸತಿ (58) ಎಂಬ ಭಕ್ತೆ ಏಕಾಏಕಿ ಕುಸಿದು ಮೃತಪಟ್ಟಿದ್ದಾರೆ. ಅವರ ಶವವನ್ನು ತವರಿಗೆ ಕಳಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಾವಿಗೆ ಕಾರಣ ಹೇಳಿಲ್ಲ.







