ಏಷ್ಯಾಕಪ್ ಕ್ರಿಕೆಟ್| ಸೂಪರ್ ಓವರ್ ನಲ್ಲಿ ಲಂಕಾ ಗೆದ್ದ ಭಾರತ

ಸಮಗ್ರ ನ್ಯೂಸ್: ಅರ್ಷದೀಪ್‌ ಸಿಂಗ್‌ ಬುದ್ದಿವಂತಿಕೆಯ ಬೌಲಿಂಗ್‌ ನೆರವಿನಿಂದ ಭಾರತ ತಂಡ, ಸೂಪರ್‌ ಓವರ್‌ನಲ್ಲಿ ಶ್ರೀಲಂಕಾ ಎದುರು ರೋಚಕ ಗೆಲುವು ಪಡೆಯಿತು. ಆ ಮೂಲಕ ಏಷ್ಯಾ ಕಪ್‌ ಟೂರ್ನಿಯಲ್ಲಿ ಸತತ ಆರು ಪಂದ್ಯಗಳನ್ನು ಗೆದ್ದಿರುವ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಟೀಮ್‌ ಇಂಡಿಯಾ, ಭಾನುವಾರ ಪಾಕಿಸ್ತಾನ ವಿರುದ್ಧದ ಫೈನಲ್‌ ಪಂದ್ಯಕ್ಕೆ ತನ್ನ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

Ad Widget ... ..

ಇದಕ್ಕೂ ಮುನ್ನ ಭಾರತ ನೀಡಿದ್ದ 203 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡ, ಪತುಮ್ ನಿಸಾಂಕ ಭರ್ಜರಿ ಶತಕದ ಬಲದಿಂದ ಗೆಲುವಿನ ಸನಿಹ ಬಂದಿತ್ತು. ಆದರೆ, ಸಿಂಹಳೀಯರಿಗೆ ಅದೃಷ್ಟ ಕೈ ಹಿಡಿಯಲಿಲ್ಲ. ನಿಗದಿತ 20 ಓವರ್‌ಗಳಲ್ಲಿ ಶ್ರೀಲಂಕಾ 202 ರನ್‌ಗಳನ್ನು ಕಲೆ ಹಾಕಿತು. ಉಭಯ ತಂಡಗಳ ಮೊತ್ತ ಸಮವಾಗಿದ್ದ ಕಾರಣ ಫಲಿತಾಂಶಕ್ಕಾಗಿ ಸೂಪರ್‌ ಓವರ್‌ ಮೊರೆ ಹೋಗಬೇಕಾಯಿತು.

Ad Widget

ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ ತಂಡಕ್ಕೆ ಅರ್ಷದೀಪ್‌ ಸಿಂಗ್‌ ಆಘಾತ ನೀಡಿದರು. ಮೊದಲ ಎಸೆತದಲ್ಲಿ ಕುಸಾಲ್‌ ಪೆರೇರಾ ಅವರನ್ನು ಔಟ್‌ ಮಾಡಿದ ಅರ್ಷದೀಪ್‌, 5 ಎಸೆತಗಳಲ್ಲಿ ಎದುರಾಳಿ ತಂಡಕ್ಕೆ ಕೇವಲ 2 ರನ್‌ ನೀಡಿ 2 ವಿಕೆಟ್‌ ಕಿತ್ತರು. ಬಳಿಕ 3 ರನ್‌ ಗುರಿಯನ್ನು ಹಿಂಬಾಲಿಸಿದ ಭಾರತ ಪರ ಕ್ರೀಸ್‌ಗೆ ಬಂದ ಸೂರ್ಯಕುಮಾರ್‌ ಯಾದವ್‌ ಮೊದಲನೇ ಎಸೆತದಲ್ಲಿ ಮೂರು ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದರು.

ಶುಕ್ರವಾರ ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಭಾರತ ನೀಡಿದ್ದ 203 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡ ತನ್ನ ಮೊದಲನೇ ವಿಕೆಟ್‌ ಅನ್ನು ಬಹುಬೇಗ ಕಳೆದುಕೊಂಡರೂ, ಪತುಮ್‌ ನಿಸಾಂಕ ಹಾಗೂ ಕುಸಾಲ್‌ ಪೆರೇರಾ ಜೋಡಿ 127 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿತ್ತು. ಸ್ಪೋಟಕ ಬ್ಯಾಟ್‌ ಮಾಡಿದ್ದ ಕುಸಾಲ್‌ ಪೆರೇರಾ 32 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 58 ರನ್‌ ಸಿಡಿಸಿ ವಿಕೆಟ್‌ ಒಪ್ಪಿಸಿದ್ದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ್ದ ಪತುಮ್‌ ನಿಸಾಂಕ, ಭಾರತದ ಬೌಲರ್‌ಗಳಿಗೆ ಬೆವರಿಳಿಸಿದರು. ಇವರು ಆಡಿದ 58 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 107 ರನ್‌ಗಳನ್ನು ಬಾರಿಸಿ ಶ್ರೀಲಂಕಾ ತಂಡವನ್ನು ಗೆಲುವಿನ ಸನಿಹ ತಂದಿದ್ದರು. ಆದರೆ ಅವರು ಹರ್ಷಿತ್‌ ರಾಣಾಗೆ ವಿಕೆಟ್‌ ಒಪ್ಪಿಸಿದರು. ಕೊನೆಯವರೆಗೂ ಹೋರಾಟ ಮಾಡಿದ ದಸೂನ್‌ ಶಾನಕ 11 ಎಸೆತಗಳಲ್ಲಿ 22 ರನ್‌ ಗಳಿಸಿದರೂ ಶ್ರೀಲಂಕಾ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. 20 ಓವರ್‌ಗಳಿಗೆ ಶ್ರೀಲಂಕಾ 5 ವಿಕೆಟ್‌ ನಷ್ಟಕ್ಕೆ 202 ರನ್‌ಗಳಿಗೆ ಸೀಮಿತವಾಯಿತು.

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡ, ಅಭಿಷೇಕ್‌ ಶರ್ಮಾ, ತಿಲಕ್‌ ವರ್ಮಾ ಹಾಗೂ ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 202 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಶ್ರೀಲಂಕಾ ತಂಡಕ್ಕೆ 203 ರನ್‌ಗಳ ಗುರಿಯನ್ನು ನೀಡಿತು. ಈ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಅಭಿಷೇಕ್‌ ಶರ್ಮಾ 61, ತಿಲಕ್‌ ವರ್ಮಾ 49* ಹಾಗೂ ಸಂಜು ಸ್ಯಾಮ್ಸನ್‌ 39 ರನ್‌ ಗಳಿಸಿದರು.

Leave a Comment

Your email address will not be published. Required fields are marked *