ಸಮಗ್ರ ನ್ಯೂಸ್:ಬೆಳಗಾವಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕಾರ್ಯಕ್ರಮದ ನಿಮಿತ್ಯ ಬುಧವಾರ ವಿಜಯಪುರಕ್ಕೆ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಬೆಳಗಾವಿಗೆ ವಾಪಸ್ ಆಗುವಾಗ ಆಕಸ್ಮಾತಾಗಿ ಕಣ್ಣಿಗೆ ಕಾಣಿಸಿದ ನಿರ್ಗತಿಕ ಕುಟುಂಬವೊಂದಕ್ಕೆ ನೆರವು ನೀಡುವ ಮೂಲಕ ಮಾನವೀಯತೆ ತೋರಿಸಿದ್ದಾರೆ.
ಕಾರ್ಯಕ್ರಮ ಮುಗಿಸಿ ಮರಳುವಾಗ ವಿಜಯಪುರ-ಬಾಗಲಕೋಟೆ ಹೆದ್ದಾರಿಯ ಪಕ್ಕ ಹನಗನಹಳ್ಳಿ ಎಂಬಲ್ಲಿ ರಸ್ತೆ ಪಕ್ಕದಲ್ಲಿ ಊಟಕ್ಕೆಂದು ಸಚಿವರು ವಾಹನ ನಿಲ್ಲಿಸಿದರು. ಊಟ ಮಾಡುವಾಗ ಪಕ್ಕದಲ್ಲಿದ್ದ ಸಣ್ಣ ಮನೆಯ ಮುಂದೆ ಅಜ್ಜಿಯೊಬ್ಬಳು ಬಾಟಲಿಗಳಲ್ಲಿ ನೀರು ತುಂಬಿಸಿ ಮನೆಯ ಮುಂದೆ ಇಡುತ್ತಿದ್ದರು.ಆ ಬಗ್ಗೆ ವಿಚಾರಿಸಿದಾಗ ರಸ್ತೆಯಲ್ಲಿ ಹೋಗುವ ಜನರು ನೀರು ಕುಡಿಯಲು ಬರುತ್ತಾರೆ.
ಅವರಿಗೆ ಸಹಾಯವಾಗಲೆಂದು ಬಾಟಲಿಗಳಲ್ಲಿ ನೀರು ತುಂಬಿ ಇಡುತ್ತಿರುವುದಾಗಿ ಅಜ್ಜಿ ಗೌರಮ್ಮ ವಾಡೇದ ತಿಳಿಸಿದರು. ಅವರೊಂದಿಗೆ ಅವರ ಮಗ ಮಲ್ಲು ಇದ್ದರು. ಅವರು ಹಳ್ಳಿಯಲ್ಲಿ ಹೊಂದಿದ್ದ ಮನೆಯ ಜಾಗ ರಸ್ತೆ ಮಾಡುವಾಗ ಕೈ ತಪ್ಪಿದೆ. ಇದರಿಂದಾಗಿ ವಾಸಿಸಲು ಮನೆಯೇ ಇರಲಿಲ್ಲ.ನಂತರ ಈ ಸ್ಥಳದಲ್ಲಿದ್ದ ತೋಟದ ಮಾಲಕರು ಒಂದೇ ಕೊಠಡಿಯ ಮನೆಯಲ್ಲಿ ವಾಸಿಸಲು ಅವಕಾಶ ನೀಡಿದರು. ಆದರೆ ಅಡುಗೆ ಮಾಡಲು ಪಾತ್ರೆಗಳಾಗಲಿ, ಹಾಸಿಗೆ- ಹೊದಿಕೆಗಳಾಗಲಿ, ಕಾಳು ಕಡಿಗಳಾಗಲಿ ಏನೂ ಇಲ್ಲದೆ ಊಟಕ್ಕೂ ಸರಿಯಾಗಿ ಗತಿ ಇಲ್ಲ ಎನ್ನುವ ಅಂಶ ಸಚಿವರಿಗೆ ತಿಳಿಯಿತು.
ಅಲ್ಲದೇ, ಅವರು ಈ ಮೊದಲು ಹೊಂದಿದ್ದ ಪಡಿತರ ಚೀಟಿ ಕೂಡ ಕಳೆದುಹೋಗಿದ್ದರಿಂದ ಸರಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎನ್ನುವುದು ಕೂಡ ತಿಳಿಯಿತು.ಕೂಡಲೇ ಲಕ್ಷ್ಮೀ ಹೆಬ್ಬಾಳ್ಳರ್ ಆ ಕುಟುಂಬಕ್ಕೆ ಸ್ವಲ್ಪಮಟ್ಟಿಗೆ ಆರ್ಥಿಕ ನೆರವು ನೀಡಿದರಲ್ಲದೆ, ಆದಷ್ಟು ಶೀಘ್ರ ಪಡಿತರ ಚೀಟಿ ಮತ್ತು ಗೃಹಲಕ್ಷ್ಮೀ ಯೋಜನೆಯ ಹಣ ಬರುವಂತೆ ಮಾಡುವುದಾಗಿ ತಿಳಿಸಿ, ಸ್ಥಳದಿಂದಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನೆರವು ನೀಡಿದ ಪೊಲೀಸ್ ಅಧಿಕಾರಿ: ಇದೇ ವೇಳೆ ಅದೇ ಮಾರ್ಗವಾಗಿ ತೆರಳುತ್ತಿದ್ದ ಎಎಸ್‌ಐ ಎಚ್.ಎಸ್.ಗೌಡರ್ ಸಚಿವರ ಬಳಿ ಆಗಮಿಸಿ, ಅಜ್ಜಿಯ ಕುಟುಂಬದ ಪರಿಸ್ಥಿತಿ ವಿವರಿಸಿದರು. ಆಗ ಅಜ್ಜಿ, ತಾವು ಉಪವಾಸವಿದ್ದ ಸಂದರ್ಭದಲ್ಲಿ ಎಎಸ್‌ಐ ತಮಗೆ ಅಕ್ಕಿ ನೀಡಿ ನೆರವು ನೀಡಿದ್ದಾರೆ ಎಂದು ಸಚಿವರಿಗೆ ತಿಳಿಸಿದರು. ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಿದ್ದಕ್ಕಾಗಿ ಸರಕಾರದ ಪರವಾಗಿ ಲಕ್ಷ್ಮೀ ಹೆಬ್ಬಾಳ್ಳರ್ ಎಎಸ್‌ಐ ಗೌಡರ್ ಗೆ ಧನ್ಯವಾದ ತಿಳಿಸಿದರು.
ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಇಂತವರಿಗಾಗಿಯೇ ಸರಕಾರ ಗೃಹಲಕ್ಷ್ಮೀ, ಅನ್ನಭಾಗ್ಯ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮುಖ್ಯಮಂತ್ರಿ ಬಡವರಿಗಾಗಿಯೇ ಯೋಜನೆಗಳನ್ನು ತಂದಿದ್ದಾರೆ.ಅದು ಯಾರಿಗೆ ತಲುಪಿಲ್ಲವೋ ಅಂತವರಿಗೆ ತಲುಪಿಸುವುದು ನಮ್ಮ ಕರ್ತವ್ಯ. ಎಎಸ್‌ಐ ಗೌಡರ್ ಮನುಷ್ಯತ್ವ ತೋರಿಸಿ ಅಜ್ಜಿಯ ಕುಟುಂಬಕ್ಕೆ ನೆರವು ನೀಡಿದ್ದಾರೆ. ಅವರ ಕಾರ್ಯ ಸ್ತುತ್ಯಾರ್ಹ. ಸರಕಾರದಿಂದ ಆ ಕುಟುಂಬಕ್ಕೆ ಎಲ್ಲ ನೆರವು ಸಿಗುವಂತೆ ಮಾಡುತ್ತೇನೆ ಎಂದು ತಿಳಿಸಿದರು.