ಸಮಗ್ರ ನ್ಯೂಸ್: ಹೊಳೇನರಸೀಪುರ ಸರ್ಕಾರಿ ನರ್ಸಿಂಗ್ ಕಾಲೇಜು ಆಡಳಿತ ಮಂಡಳಿ ತಮಗೆ ಗಡ್ಡ ತೆಗೆಯುವಂತೆ ಸೂಚನೆ ನೀಡಿದೆ ಅಂತ 13ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳು ಟ್ವೀಟ್ ಮೂಲಕ ಹೊಳೆನರಸೀಪುರ ಸರ್ಕಾರಿ ನರ್ಸಿಂಗ್ ಕಾಲೇಜಿನ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಇದೇ ವಿಚಾರವಾಗಿ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ನಡುವೆ ಸಂಘರ್ಷ ತಾರಕಕ್ಕೇರಿದೆ.
ಪಿಎಂಎಸ್ಎಸ್ ಯೋಜನೆಯಡಿ ನರ್ಸಿಂಗ್ ಓದಲು ಜಮ್ಮು-ಕಾಶ್ಮೀರದಿಂದ 13ಕ್ಕೂ ಹೆಚ್ಚು ಮುಸ್ಲಿಂ ಯುವಕರು ಹೊಳೆನರಸೀಪುರಕ್ಕೆ ಬಂದಿದ್ದಾರೆ. ವಿದ್ಯಾರ್ಥಿಗಳು ಹೊಳೆನರಸೀಪುರ ಸರ್ಕಾರಿ ನರ್ಸಿಂಗ್ ಕಾಲೇಜೀನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಗಡ್ಡ ತೆಗೆದು ಕಾಲೇಜು ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಹೇಳಿದ್ದಾರೆ. ಆದರೆ, ಗಡ್ಡ ತೆಗೆಯಲು ವಿದ್ಯಾರ್ಥಿಗಳು ನಿರಾಕರಿಸಿದ್ದು ಇದೀಗ ವಿದ್ಯಾರ್ಥಿಗಳು ಕಾಲೇಜು ಮೇಲೆ ಆರೋಪ ಮಾಡಿದ್ದಾರೆ.
ನಮ್ಮ ಸಂಪ್ರದಾಯದಂತೆ ಗಡ್ಡ ಬಿಡುವುದು ನಮ್ಮ ಹಕ್ಕು. ಗಡ್ಡ ತೆಗೆಯುವಂತೆ ಸೂಚನೆ ನೀಡಿದ್ದು, ನಮ್ಮ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ. ಕೂಡಲೇ ಮಧ್ಯಪ್ರವೇಶಿಸಿ ಸಮಮಸ್ಯೆ ಬಗೆಹರಿಸುವಂತೆ” ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮ ಎಕ್ಸ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಹಾಗೂ ಅಲ್ಲಿನ ಪ್ರಮುಖ ನಾಯಕರಿಗೆ ಮನವಿ ಮಾಡಿದ್ದಾರೆ. ಅಲ್ಲದೇ, ವಿದ್ಯಾರ್ಥಿಗಳು ಜಮ್ಮು-ಕಾಶ್ಮೀರ ಸ್ಟುಡೆಂಟ್ಸ್ ಅಸೋಸಿಯೇಷನ್ ಮುಂದೆಯೂ ಮೊರೆ ಇಟ್ಟಿದ್ದಾರೆ.
ಕಾಲೇಜಿನ ಪ್ರಾಂಶುಪಾಲ ಹೇಳಿದ್ದೇನು..?
ಇದೇ ವಿಚಾರವಾಗಿ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ, ನರ್ಸಿಂಗ್ ಕೋರ್ಸ್ ಆಗಿರುವುದರಿಂದ ಕ್ಲಿನಕಲ್ ಲ್ಯಾಬ್ನಲ್ಲಿ ಗಡ್ಡ ಬಿಟ್ಟುಕೊಂಡು ಭಾಗವಹಿಸಿದರೆ ಸಮಸ್ಯೆಯಾಗುತ್ತದೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳಿಗೆ ಗಡ್ಡ ತೆಗೆಯುವಂತೆ ಹೇಳಿದ್ದೇವೆ. ಕೇವಲ ಮುಸ್ಲಿಂ ಯುವಕರಿಗೆ ಮಾತ್ರ ಗಡ್ಡ ತೆಗೆಯುವಂತೆ ಹೇಳಿಲ್ಲ ಎಂದು ಹೇಳಿದರು.
ನಮ್ಮ ಕಾಲೇಜಿನಲ್ಲಿ ಜಮ್ಮು-ಕಾಶ್ಮೀರದ 13 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರು ಕಾಲೇಜಿಗೆ ಸರಿಯಾಗಿ ಬರುತ್ತಿರಲಿಲ್ಲ. ಗಡ್ಡ ಬಿಟ್ಟುಕೊಂಡು, ಕೊಳೆಯಾದ ಬಟ್ಟೆ ತೊಟ್ಟುಕೊಂಡು ಬರುತ್ತಿದ್ದರು. ಶೂ ಬದಲು ಚಪ್ಪಲಿ ಹಾಕಿಕೊಂಡು ಬರುತ್ತಿದ್ದರು. ಗಡ್ಡ ತೆಗೆದು, ಚಪ್ಪಲಿ ಹಾಕಿಕೊಂಡು ಸರಿಯಾಗಿ ಬನ್ನಿ ಅಂತ ಮೂರು ದಿನ ಸೂಚನೆ ನೀಡಿದರೂ ವಿದ್ಯಾರ್ಥಿಗಳು ಮಾತು ಕೇಳುತ್ತಿರಲಿಲ್ಲ. ತಮ್ಮ ತಪ್ಪು ಮುಚ್ಚಿಕೊಳ್ಳಲು ವಿಷಯವನ್ನು ಬೇರೆ ತರ ತಿರುಚಿದ್ದಾರೆ. ಈ ವಿವಾದವನ್ನು ಸೃಷ್ಟಿಸಿದ್ದಾರೆ ಎಂದರು.







