ಸಮಗ್ರ ನ್ಯೂಸ್: ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ಅಗತ್ಯವಿದ್ದರೆ ಕುಮಾರಸ್ವಾಮಿ ಅವರನ್ನು ಬಂಧಿಸುತ್ತೇವೆ ಎಂದು ಸಿಎಂ ಹೇಳಿಕೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಯಾವ ಸಿಎಂ ಕೂಡ ಇಂತಹ ಭಂಡತನವನ್ನು ಪ್ರದರ್ಶಿಸಿರಲಿಲ್ಲ ಎಂದು ಕಿಡಿಕಾರಿದ್ದಾರೆ.
ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ನಿಯಮ ಉಲ್ಲಂಘಿಸಿ ಗಣಿಗಾರಿಕೆ ಗುತ್ತಿಗೆ ಮುಂಜೂರು ಮಾಡಿದ್ದ ಆರೋಪ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಗೆ ಲೋಕಾಯುಕ್ತ ಸಿದ್ಧತೆ ನಡೆಸುತ್ತಿರುವ ಬಗ್ಗೆ ಕೇಂದ್ರ ಸಚಿವರು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಅಗತ್ಯ ಬಿದ್ರೆ ಕುಮಾರಸ್ವಾಮಿ ಬಂಧನ ಮಾಡುತ್ತೇವೆ ಎಂಬ ಸಿಎಂ ಹೇಳಿಕೆಗೆ ಕಿಡಿಕಾರಿರುವ ಅವರು, ಹೆಚ್.ಡಿ ಕುಮಾರಸ್ವಾಮಿಗೆ ಭಯ ಶುರುವಾಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನನಗೆ ಭಯ ಶುರುವಾಗಿದೆಯಾ, ನನ್ನ ನೋಡಿದ್ರೆ ಹಾಗೆ ಅನಿಸುತ್ತಾ? ಎಂದು ತಿರುಗೇಟು ನೀಡಿದ್ದಾರೆ.
ಕಳೆದ ವಾರದಿಂದ ಮುಖ್ಯಮಂತ್ರಿ ಹೇಗೆ ನಡೆದುಕೊಂಡಿದ್ದಾರೆ ನೋಡಿದ್ದೀರಲ್ವಾ? ಇವರು ಏನು ಮಾಡಿದ್ದಾರೆ ಎಂದು ಜನರು ನೋಡಿದ್ದಾರೆ. ಮುಡಾ ಆಸ್ತಿಯನ್ನ ನನ್ನ ಆಸ್ತಿ ಅಂತ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ನನಗೆ ಯಾವುದೇ ಭಯ ಇಲ್ಲ, ನನ್ನ ಬಂಧನ ಮಾಡೋಕೆ ನೂರು ಸಿದ್ದರಾಮಯ್ಯ ಬರಬೇಕು ಎಂದು ಹೇಳಿದರು.