ಸಮಗ್ರ ನ್ಯೂಸ್ : ಪಲ್ಟಿಯಾದ ಲಾರಿಯಲ್ಲಿ ಬರೋಬ್ಬರಿ 7 ಕೋಟಿ ಹಣವನ್ನು ವಶಕ್ಕೆ ಪಡೆದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಈ ಮೂಲಕ ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಎರಡನೇ ಬಾರಿ ದೊಡ್ಡ ಮೊತ್ತದ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ವಾಹನ ವಿಜಯವಾಡದಿಂದ ವಿಶಾಖಪಟ್ಟಣಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಪೂರ್ವ ಗೋದಾವರಿ ಪೊಲೀಸರು ವಾಹನದಿಂದ 7 ಬಾಕ್ಸ್ಗಳಲ್ಲಿ ತುಂಬಿದ್ದ 7 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.
ನಲ್ಲಜರ್ಲ ಮಂಡಲದ ಅನಂತಪಲ್ಲಿ ಎಂಬಲ್ಲಿ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ವಾಹನ ಪಲ್ಟಿಯಾಗುತ್ತಿದಂತೆಯೇ ಅದರಲ್ಲಿದ್ದ ಸುಮಾರು7 ರಟ್ಟಿನ ಡಬ್ಬಗಳನ್ನು ಒಂದು ಗೋಣಿಚೀಲದಿಂದ ಇನ್ನೊಂದು ಚೀಲಕ್ಕೆ ಹಾಕುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿಕೊಂಡ ಮೊತ್ತ ಸುಮಾರು 7 ಕೋಟಿ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಪಲ್ಟಿಯಾದ ವಾಹನದ ಚಾಲಕನಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಗೋಪಾಲಪುರಂ ಆಸ್ಪತ್ರೆಗೆ ರವಾನಿಸಲಾಗಿದೆ. ಈ ನಡುವೆ ಪೊಲೀಸರು ತನಿಖೆ ಆರಂಭಿಸಿದ್ದು, ನಗದು ಮೂಲವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಆಂದ್ರಪ್ರದೇಶದಲ್ಲಿ ಮೇ 13ರಂದು ಚುನಾವಣೆ ನಡೆಯಲಿದೆ.