ಸಮಗ್ರ ನ್ಯೂಸ್: ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಮತ್ತೊಬ್ಬನಿಗೆ ಗಾಯಗಳಾಗಿದ್ದು, ಕಾರಿನಲ್ಲಿದ್ದ ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಸುನೀಲ್ ಬಸವರಾಜ್ ನರುಣೆ (28) ಮೃತರು. ಗಾಯಗೊಂಡಿರುವ ಅಂಕುಶ್ ಪೂಜಾರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನಿಬ್ಬರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಬಸವಕಲ್ಯಾಣ ತಾಲೂಕಿನ ಸಸ್ತಾಪುರ ಬಂಗ್ಲಾದ ಅತಲಾಪೂರ ಕ್ರಾಸ್ ಬಳಿ ಎರ್ಟಿಗಾ ಕಾರು ವೇಗವಾಗಿ ಚಲಿಸುತ್ತಿತ್ತು. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಸುನೀಲ್ ಬಸವರಾಜ್ ನರುಣೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಂಕುಶ್ ಪೂಜಾರಿಗೆ ಬಸವಕಲ್ಯಾಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣ ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.