ಸಮಗ್ರ ನ್ಯೂಸ್: ಹಾಲಿ ಸಂಸದ ವರುಣ್ ಗಾಂಧಿಗೆ ಪೀಲಿಭೀತ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ, ಕಾಂಗ್ರೆಸ್ ಅವರಿಗೆ ಅಲ್ಲಿಂದಲೇ ಟಿಕೆಟ್ ನೀಡುವುದಾಗಿ ಆಫರ್ ನೀಡಿದೆ. ಬಿಜೆಪಿಯು ವರುಣ್ ಗಾಂಧಿ ಬದಲಿಗೆ ಈಗಷ್ಟೇ ಬಿಜೆಪಿ ಸೇರಿದ್ದ ಜಿತಿನ್ ಪ್ರಸಾದ ಅವರಿಗೆ ಪೀಲಿಭೀತ್ ಕ್ಷೇತ್ರದಿಂದ ಟಿಕೆಟ್ ನೀಡಿತ್ತು.
ವರುಣ್ ಗಾಂಧಿ ಅವರು ಸಚ್ಚಾರಿತ್ರ್ಯ ಹೊಂದಿದ್ದು, ತಮ್ಮ ಜೀವನವನ್ನು ಪಾರದರ್ಶಕತೆಯಿಂದ ನಡೆಸಿದ್ದಾರೆ. ಅವರು ಮೇಧಾವಿ ಆಗಿದ್ದರೂ ಸಹ ಗಾಂಧಿ ಕುಟುಂಬದ ಕುಡಿ ಎಂಬ ಕಾರಣದಿಂದ ಬಿಜೆಪಿ ಅವರಿಗೆ ಟಿಕೆಟ್ ನಿರಾಕರಿಸಿದೆ. ಅವರು ಕಾಂಗ್ರೆಸ್ಗೆ ಬರಲೆಂದು ಸ್ವಾಗತಿಸುತ್ತೇವೆ. ಅವರು ಬಂದಲ್ಲಿ ಪೀಲಿಭೀತ್ ಕ್ಷೇತ್ರದಿಂದಲೇ ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಧೀರ್ ರಂಜನ್ ಚೌಧರಿ ತಿಳಿಸಿದರು.
ಚುನಾವಣೆಗೆ ವರುಣ್ ಗಾಂಧಿ ಮಾನಸಿಕವಾಗಿ ಸಜ್ಜಾಗಿದ್ದು, ಈಗಾಗಲೇ ಅವರ ನಿಕಟವರ್ತಿಗಳ ಮೂಲಕ ನಾಮಪತ್ರದ ನಾಲ್ಕು ಪ್ರತಿಗಳನ್ನು ತರಿಸಿಕೊಂಡಿದ್ದರು. ಅಲ್ಲದೆ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಪ್ರಚಾರಕ್ಕೆಂದು ಕನಿಷ್ಠ ಎರಡು ಕಾರುಗಳು ಮತ್ತು 10 ಬೈಕ್ಗಳನ್ನು ಸಿದ್ಧಗೊಳಿಸುವಂತೆ ಕಾರ್ಯಕರ್ತರಿಗೆ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಈಗ ಬಿಜೆಪಿ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಅವರು ಸ್ವತಂತ್ರವಾಗಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ ವರುಣ್ ಗಾಂಧಿಯ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.