ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಬಹಿರಂಗವಾಗಿದ್ದು, ರಾಜ್ಯ ರಾಜಕಾರಣಕ್ಕೆ ರೋಚಕ ಟ್ವಿಸ್ಟ್ ದೊರೆಯುವ ಸಾಧ್ಯತೆ ಇದೆ.
ತಮ್ಮ ಅಪ್ತರ ಬಳಿ ಮಾತುಕತೆ ನಡೆಸಿರುವ ನಳಿನ್ ಕುಮಾರ್ ಕಟೀಲ್ ಅವರು, ಈ ಸಂಗತಿಯನ್ನು ಬಹಿರಂಗ ಪಡಿಸಿರುವ ರೀತಿ ಯಡಿಯೂರಪ್ಪ ಅವರ ಪದಚ್ಯುತಿಯ ಸುಳಿವು ನೀಡಿದೆ. ಅಲ್ಲದೆ ಸದ್ಯದಲ್ಲೇ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬರಲಿದ್ದಾರೆ ಎಂಬುದನ್ನು ಖಚಿತಪಡಿಸಿದಂತಾಗಿದೆ.
ಕಟೀಲ್ ಅವರು ತುಳುವಿನಲ್ಲಿ ಮಾತನಾಡಿದ್ದು, ‘ಯಾರಿಗೂ ಹೇಳಬೇಡಿ. ಶೆಟ್ಟರ್, ಈಶ್ವರಪ್ಪ ಮತ್ತವರ ಟೀಮು ಹೊರಬೀಳಲಿದ್ದು ಆನಂತರ ನಾವು ಹೇಳಿದಂತೆಯೇ ನಡೆಯಲಿದೆ. ಯಾರೇ ಬಂದರೂ ನಮಗೆ ಬೇಕಾದವರೇ ಆಗಿರಲಿದ್ದು, ಮೂರು ಜನರ ಹೆಸರು ಹೈಕಮಾಂಡ್ ಗಮನದಲ್ಲಿದೆ’ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರಿಗೆ ದೊಡ್ಡ ಶಾಕ್ ನೀಡಿದ್ದಾರೆ.
ಈ ನಡುವೆ ಪ್ರತಿಕ್ರಿಯಿಸಿರುವ ನಳಿನ್ ಕುಮಾರ್ ‘ಆ ಆಡಿಯೋ ನನ್ನದಲ್ಲ, ಈ ಕುರಿತು ತನಿಖೆಯಾಗಲಿ, ನಾನು ಹಾಗೆ ಹೇಳೇ ಇಲ್ಲ’ ಎಂದಿದ್ದಾರೆ.





