ಸಮಗ್ರ ನ್ಯೂಸ್: ಬಿಜೆಪಿಯಲ್ಲಿ ಈಗಾಗಲೇ ಟಿಕೆಟ್ ಫೈಟ್ ಜೋರಾಗಿದೆ. ಕೆಲ ನಾಯಕರಿಗೆ ಟಿಕೆಟ್ ಸಿಗುತ್ತದೆ, ಸಿಗಲ್ಲ ಎಂಬ ಗೊಂದಲಗಳು ಹೆಚ್ಚಾಗಿದೆ. ಇದೇ ವಿಚಾರವಾಗಿ ಮೈಸೂರಿನಲ್ಲಿ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ಸಿಗಲ್ಲ ಯದುವೀರ್ ಒಡೆಯರಿಗೆ ಟಿಕೆಟ್ ಕೊಡಲಾಗುತ್ತದೆ ಎಂಬ ಮಾಹಿತಿಗಳು ಹೊರಬೀಳುತ್ತಿದೆ. ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ ಈಗಲೂ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಒಂದು ವೇಳೆ ಟಿಕೆಟ್ ಕೈ ತಪ್ಪಿದರೂ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.
ಅರಮನೆಯ ಎಸಿ ರೂಂನಲ್ಲಿ ರಾಜನಾಗಿ ಇರುವ ಬದಲು ಪ್ರಜೆಗಳ ರೀತಿ ಬದುಕಲು ಯದುವೀರ್ ಬಂದರೆ ಸ್ವಾಗತಿಸದೆ ಇರುವುದಕ್ಕೆ ಆಗುತ್ತಾ?. ರಾಜ – ಪ್ರಜೆ ನಡುವೆ ವ್ಯತ್ಯಾಸ ತೆಗೆದು ರಾಜರೇ ಪ್ರಜೆಗಳ ಜೊತೆ ಇರಲು ಬಂದರೆ ನನ್ನ ಸ್ವಾಗತ. ಅರಮನೆ ಆಸ್ತಿ ವಿಚಾರದಲ್ಲಿ ಸರ್ಕಾರದ ನಡುವೆ ವ್ಯಾಜ್ಯಗಳಿವೆ. ಅದರಲ್ಲಿ ಬಹುತೇಕ ಆಸ್ತಿಗಳು ಸಾರ್ವಜನಿಕರ ಬಳಕೆಯಲ್ಲಿವೆ. ಯದುವೀರ್ ಜನಪ್ರತಿನಿಧಿ ಆಗಿ ಅದನ್ನೆಲ್ಲಾ ಜನರಿಗೆ ಬಿಟ್ಟು ಕೊಡಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಯದುವೀರ ಅವರು ಅರಮನೆಯಲ್ಲಿದ್ದವರು ಅವರು ಬಿಜೆಪಿ ಕಾರ್ಯಕರ್ತರ ಜತೆ ಕುಳಿತು ಧಿಕ್ಕಾರ ಕೂಗುತ್ತಾರೆ ಅಂದರೆ ದೊಡ್ಡ ವಿಷಯ. ರಾಜರಾಗಿದ್ದೂ ಪ್ರಜೆಯಾಗಲು ರೆಡಿ ಆಗಿದ್ದಾರೆ. ಚಾಮುಂಡಿಬೆಟ್ಟಕ್ಕೆ ಹೊಸ ಪೈಪ್ ಲೈನ್ ಆಗಲು ಪ್ರಮೋದಾದೇವಿ ಒಡೆಯರ್ ಬಿಟ್ಟಿರಲಿಲ್ಲ. ಮುಂದೆ ಹೊಸ ಪೈಪ್ ಲೈನ್ ಆಗುತ್ತದೆ ಎಂದು ಪ್ರತಾಪ್ ಸಿಂಹ ಕೆಣಕಿದ್ದಾರೆ.
ಮೈಸೂರಿನ ಲಲಿತ ಮಹಲ್ ಅರಮನೆ, ಸಮೀಪದ ಹೆಲಿಪ್ಯಾಡ್ ಜಾಗ, ಸರ್ವೇ ನಂಬರ್ 4ರ ಸುಮಾರು 1200 ಎಕರೆ ಜಾಗ, ವಿಜಯಶ್ರೀಪುರದ ಮನೆಗಳು, ವಸ್ತು ಪ್ರದರ್ಶನ ಪ್ರಾಧಿಕಾರದ ಜಾಗ ಎಲ್ಲದರ ಬಗ್ಗೆ ವ್ಯಾಜ್ಯಗಳು ಇವೆ. ಯದುವೀರ್ ಜನಪ್ರತಿನಿಧಿಯಾದ್ರೆ ಆ ಎಲ್ಲ ಜಾಗವನ್ನೂ ಜನರಿಗೆ ಬಿಟ್ಟು ಕೊಡಬೇಕಾಗುತ್ತೆ. ಹೀಗಾಗಿ ಯದುವೀರ್ ಅವರನ್ನು ಸ್ವಾಗತ ಮಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ನಿಮ್ಮ ಮನೆ ಕಾಯುವವರಿಗೆ ಟಿಕೆಟ್ ಕೊಡಬೇಕೇ ಹೊರತು ನಾವು ಅವರ ಮನೆ ಕಾಯುವ ಸ್ಥಿತಿ ಬರಬಾರದು ಎಂದು ಹೇಳುವ ಮೂಲಕ ಪ್ರತಾಪ್ ಸಿಂಹ ಅವರು ಯದುವೀರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.