ಸಮಗ್ರ ನ್ಯೂಸ್: ಹುಲಿ ಉಗುರು ಕೊಂಬುಗಳು ಸೇರಿದಂತೆ ಕಾಡು ಪ್ರಾಣಿಗಳ ದೇಹದ ವಿವಿಧ ಭಾಗಗಳನ್ನ ಅರಣ್ಯ ಇಲಾಖೆಗೆ ಹಿಂತಿರುಗಿಸಲು ಸರ್ಕಾರ ಈಗಾಗಲೆ ಮೂರು ತಿಂಗಳ ಗಡುವು ನೀಡಿದೆ. ಆದರೆ, ಈ ಗಡುವು ಕೊಡಗು ಜಿಲ್ಲೆಯಲ್ಲಿ ತಲ್ಲಣ ಸೃಷ್ಟಿಸಿದೆ.
ಜಿಲ್ಲೆಯ ನೂರಾರು ದೇವಸ್ಥಾನಗಳಲ್ಲಿ ನೂರಾರು ವರ್ಷಗಳಿಂದ ಜಿಂಕೆ, ಕಡವೆ ಕೊಂಬುಗಳು, ಚಮರಿ ಮೃಗದ ಬಾಲ ನವಿಲು ಗರಿಗಳನ್ನ ಧಾರ್ಮಿಕ ಉತ್ಸವಗಳಲ್ಲಿ ಬಳಸಲಾಗುತ್ತಿದೆ. ಇವುಗಳನ್ನ ಹಿಂತಿರುಗಿಸಲು ಆಗುವುದಿಲ್ಲ. ಹಾಗಾಗಿ ಸರ್ಕಾರ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಕೊಡಗು ಜಿಲ್ಲೆಯ ಹಬ್ಬ ಹರಿದಿನಗಳು ಕೂಡ ಪ್ರಕೃತಿಯನ್ನೇ ಆಧರಿಸಿವೆ. ಇಲ್ಲಿನ ಬಹುತೇಕ ದೇವಸ್ಥಾನಗಳಲ್ಲಿ ವಾರ್ಷಿಕ ಉತ್ಸವ ನಡೆಯುವಾಗ ಜಿಂಕೆ, ಕಡವೆಯ ಕೊಂಬುಗಳನ್ನ ಹಾಗೆಯೇ ನವಿಲುಗರಿಗಳ ಗೊಂಚಲನ್ನು ಹಿಡಿದು ನೃತ್ಯ ಮಾಡಲಾಗುತ್ತದೆ. ಇದು ಇಲ್ಲಿ ನೂರಾರು ವರ್ಷಗಳಿಂದ ನಡೆದು ಬಂದಿದೆ. ಇಲ್ಲಿರುವ ಕೊಂಬುಗಳು ಕೂಡ ನೂರಾರು ವರ್ಷಗಳಷ್ಟು ಹಳೆಯದಾಗಿವೆ. ಆದ್ರೆ, ಇದೀಗ ರಾಜ್ಯದಲ್ಲಿ ಕಾಡು ಪ್ರಾಣಿಗಳ ದೇಹದ ಯಾವುದೇ ಭಾಗವನ್ನ ಸರ್ಕಾರಕ್ಕೆ ಹಿಂತಿರುಗಿಸಲು ಜನವರಿ 16ರಿಂದ ಮೂರು ತಿಂಗಳ ಗಡುವು ನೀಡಲಾಗಿದೆ. ಈ ಗಡುವು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ.
ಇದೀಗ ಜಿಲ್ಲೆಯಲ್ಲಿ ಹಬ್ಬಗಳ ಸೀಸನ್. ದೇವಸ್ಥಾನಗಳಲ್ಲಿ ವಾರ್ಷಿಕ ಉತ್ಸವಗಳು ನಡೆಯುತ್ತವೆ. ದೇವರುಗಳನ್ನು ನೃತ್ಯ ಮಾಡಿ ಸಂತೃಪ್ತಿಗೊಳಿಸಲು ಈ ಕೊಂಬು ಗರಿಗಳನ್ನು ಬಳಸಲಾಗುತ್ತದೆ. ಈ ಕೊಂಬುಗಳನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸಿದ್ರೆ, ದೇವರ ಹಬ್ಬಗಳಿಗೆ ಮಹತ್ವ ಇರುವುದಿಲ್ಲ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಬಹಳಷ್ಟು ದೇವಸ್ಥಾನಗಳಲ್ಲಿ ಇಂದಿಗೂ ಕೊಂಬಾಟ್, ಪೀಲಿಯಾಟ್ ಎಂಬ ನೃತ್ಯಪ್ರಕಾರಗಳಲ್ಲಿ ಜಿಂಕೆ, ಕಡವೆಯ ಕೊಂಬುಗಳನ್ನ ಹಾಗೂ ನವಿಲುಗರಿಗಳನ್ನ ಹಿಡಿದು ನೃತ್ಯ ಮಾಡಲಾಗುತ್ತದೆ. ಆದರೆ, ಇದೀಗ ಈ ದೇವಸ್ಥಾನಗಳ ಆಡಳಿತ ಮಂಡಳಿ ಹಾಗೂ ಭಕ್ತರಲ್ಲಿ ಗೊಂದಲ ತಲೆದೋರಿದೆ. ದೇವರ ಉತ್ಸವಗಳಲ್ಲಿ ಈ ಕೊಂಬುಗಳನ್ನ ಬಳಕೆ ಮಾಡಿದ್ರೆ ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗುತ್ತದೆಯೇ ಎಂಬ ಆತಂಕ ಮೂಡಿದೆ. ಹಾಗಾಗಿ ನೂರಾರು ವರ್ಷಗಳಿಂದ ಆಚರಣೆಯಲ್ಲಿರುವ ತಮ್ಮ ಪದ್ಧತಿ ಪಾಲನೆಗೆ ಅವಕಾಶ ನೀಡುವಂತೆ ಕೋರಿದ್ದಾರೆ. ಇವು ಯಾವುದು ಕೂಡ ಇತ್ತೀಚೆಗೆ ಪ್ರಾಣಿ ಹತ್ಯೆ ಮಾಡಿರುವಂತಹದ್ದಲ್ಲ. ಎಲ್ಲವೂ ನೂರಾರು ವರ್ಷಗಳಷ್ಟು ಹಳೆಯದ್ದು.
ಸಧ್ಯ ಕೊಡಗು ಜನರ ಬೇಡಿಕೆಗೆ ರಾಜ್ಯ ಸರ್ಕಾರ ಯಾವ ಪ್ರತಿಕ್ರಿಯೆ ನೀಡುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಈ ಹಿಂದೆ ದೇವಸ್ಥಾನ ಹಾಗೂ ಐನ್ಮನೆಗಳಲ್ಲಿ ಇರುವಂತಹ ಕೊಂಬುಗಳನ್ನು ನೋಂದಾವಣಿ ಮಾಡಿ ಇಟ್ಟುಕೊಳ್ಳುವಂತೆ ಅರಣ್ಯ ಇಲಾಖೆ ಸೂಚಿಸಿತ್ತು. ಆದ್ರೆ ಆ ಸಂದರ್ಭ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಆದ್ರೆ ಇದೀಗ ಕಾನೂನು ಜಾರಿಗೆ ಅರಣ್ಯ ಇಲಾಖೆ ಮುಂದಾಗಿರುವುದು ನಿದ್ದೆಗೆಡಿಸಿದೆ.