ಸಮಗ್ರ ನ್ಯೂಸ್: ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ಹೆಸರಿನಲ್ಲಿ ನಕಲಿ ಪಾಸ್ ಸೃಷ್ಟಿಸಿ, ಕಾರಿಗೆ ಹಾಕಿಕೊಂಡು ಸಂಚರಿಸುತ್ತಿದ್ದ ಆರೋಪಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಯನಗರದ ನಿವಾಸಿ, ಹಣ್ಣಿನ ವ್ಯಾಪಾರಿ ಸಿಬ್ಗತ್ ಉಲ್ಲಾ ಬೋಖರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ‘ನಕಲಿ ಪಾಸ್ ಸೃಷ್ಟಿಸಿ, ವ್ಯಕ್ತಿಯೊಬ್ಬ ಓಡಾಟ ನಡೆಸುತ್ತಿರುವ ಕುರಿತು ಬಿ.ಕೆ.ಹರಿಪ್ರಸಾದ್ ಅವರ ಆಪ್ತ ಸಹಾಯಕ ಎಸ್.ಬಿ.ಅವಿನಾಶ್ ಅವರು ಡಿ.29ರಂದು ದೂರು ನೀಡಿದ್ದರು. ದೂರು ಆಧರಿಸಿ, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಓಡಾಟ ನಡೆಸುತ್ತಿದ್ದ ಇನ್ನೊವಾ ಕ್ರಿಸ್ಟಾ ಕಾರನ್ನು ಜಪ್ತಿ ಮಾಡಲಾಗಿದೆ.
ಟೋಲ್‌ಗಳಲ್ಲಿ ಸುಂಕ ಪಾವತಿಯಿಂದ ತಪ್ಪಿಸಿಕೊಳ್ಳಲು ಎಂಎಲ್‌ಸಿ ಹೆಸರಿನಲ್ಲಿ ನಕಲಿ ಪಾಸ್ ಸೃಷ್ಟಿಸಿಕೊಂಡು ಸಂಚರಿಸುತ್ತಿದ್ದ. ‘ಪಾಸ್‌ನಲ್ಲಿ ವಾಹನದ ನೋಂದಣಿ ಸಂಖ್ಯೆ, ಬಿ.ಕೆ.ಹರಿಪ್ರಸಾದ್ ಅವರ ಹೆಸರು ಹಾಕಿಕೊಂಡು ಪಾಸ್ ತಯಾರಿಸಿದ್ದ. ವಿಧಾನ ಪರಿಷತ್ ಕಾರ್ಯದರ್ಶಿ ಅವರ ಸಹಿಯನ್ನು ನಕಲು ಮಾಡಲಾಗಿತ್ತು’ ಎಂದು ಪೊಲೀಸರು ಹೇಳಿದ್ದಾರೆ.