ಸಮಗ್ರ ನ್ಯೂಸ್: 2024ರ ಜನವರಿ 22ರಂದು ಆಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನೆರವೇರಲಿದ್ದು, ಇದು ದೇಶದ ಜನರ ಪಾಲಿಗೆ ಸಂಭ್ರಮದ ಕ್ಷಣವಾಗಲಿದೆ. ಆದ್ದರಿಂದ ಈ ದಿನವನ್ನು ಹಬ್ಬದಂತೆ ಆಚರಣೆ ಮಾಡಬೇಕು ಎಂದು ಆರ್‍ಎಸ್‍ಎಸ್ ದೇಶದ ಜನರಿಗೆ ಕರೆ ನೀಡಿದೆ.
ಆಯೋಧ್ಯೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಎಂಬುದು ನಮಗೊಂದು ಹಬ್ಬದ ಕ್ಷಣ. ಎಲ್ಲರಿಗೂ ಅಲ್ಲಿಗೆ ಹೋಗಲು ಸಾಧ್ಯವಾಗುವುದಿಲ್ಲ. ಹತ್ತಿರದ ದೇವಸ್ಥಾನಗಳಿಗೆ ತೆರಳುವ ಮೂಲಕ ಸಂಭ್ರಮವನ್ನು ಆಚರಿಸಬೇಕು. ಆ ರಾತ್ರಿ ಎಲ್ಲರೂ ಮನೆಯಲ್ಲಿ ದೀಪ ಬೆಳಗಿಸಬೇಕು. ಇದು ದೇಶದ ಪ್ರತಿಯೊಬ್ಬ ಪ್ರಜೆಗೆ ಆರ್‍ಎಸ್‍ಎಸ್ ನೀಡುತ್ತಿರುವ ಕರೆ ಎಂದು ಆರ್‍ಎಸ್‍ಎಸ್‍ನ ಪ್ರಚಾರ ಮುಖ್ಯಸ್ಥ ಸುನಿಲ್ ಅಂಬೆಕರ್ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಆರ್‍ಎಸ್‍ಎಸ್‍ನ ರಾಷ್ಟ್ರೀಯ ಕಾರ್ಯನಿರ್ವಾಹಕ ಸಭೆಯಲ್ಲಿ ರಾಮಮಂದಿರ ಉದ್ಘಾಟನೆ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಜನವರಿ 1ರಿಂದ 15ರವರೆಗೆ ಆರ್‍ಎಸ್‍ಎಸ್ ಕಾರ್ಯಕರ್ತರು ಮನೆಮನೆಗೆ ತೆರಳಿ ಆಮಂತ್ರಣ ಪತ್ರಿಕೆ ಹಂಚಲಿದ್ದಾರೆ ಎಂದು ಆರ್‍ಎಸ್‍ಎಸ್ ತಿಳಿಸಿದೆ.







