ಬೆಂಗಳೂರು: ನಿನ್ನೆ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬೆಂಗಳೂರಿನ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರ ಕೊಲೆ ಪ್ರಕರಣದ ಆರೋಪಿಗಳನ್ನು ಇಂದು ಪೊಲೀಸರು ಬಂಧಿಸಿದ್ದಾರೆ.
ಹತ್ಯೆಯ ಪ್ರಮುಖ ಆರೋಪಿಗಳಾದ ಪೀಟರ್ ಮತ್ತು ಸೂರ್ಯ ಎಂಬ ಇಬ್ಬರು ನಗರದ ಸುಮನಹಳ್ಳಿ ಎಂಬಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿದ್ದಾರೆ. ಆರೋಪಿಗಳನ್ನು ಕಂಡ ಕೂಡಲೇ ಪೊಲೀಸರು ಶರಣಾಗುವಂತೆ ತಿಳಿಸಿದ್ದಾರೆ. ಆದರೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿ ಸಿದ್ದಾರೆ. ಈ ವೇಳೆ ಪೊಲೀಸರು ಸ್ವರಕ್ಷಣೆಗಾಗಿ ಪೀಟರ್ ಮತ್ತು ಸೂರ್ಯ ಅವರ ಕಾಲಿಗೆ ಶೂಟ್ ಮಾಡಿದ್ದಾರೆ. ಬಳಿಕ ಆರೋಪಿಗಳನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ಬೆಳಿಗ್ಗೆ ಚಲವಾದಿ ಪಾಳ್ಯದ ಮಾಜಿ ಕಾರ್ಪೊರೇಟರ್ ರೇಖಾ ಅವರನ್ನು ಅವರ ಮನೆಯಲ್ಲಿ ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆಯ ಬಗ್ಗೆ ರೇಖಾ ಅವರ ಜೊತೆಯಲ್ಲಿದ್ದ ಪೀಟರ್ ಮತ್ತು ಸೂರ್ಯ ಅವರ ಮೇಲೆ ಅನುಮಾನವಿತ್ತು. ಇದೀಗ ಅವರಿಬ್ಬರ ಬಂಧನವಾಗಿದ್ದು ವಿಚಾರಣೆ ಬಳಿಕ ಕೊಲೆಗೆ ನಿಖರ ಕಾರಣ ತಿಳಿದುಬರಲಿದೆ.