ಆಂಧ್ರ ಪ್ರದೇಶ: ಇಲ್ಲಿನ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ವಿರುದ್ಧ (ಸುಮೋಟೋ) 11 ಪ್ರಕರಣಗಳನ್ನು ದಾಖಲಿಸಿದೆ.
ಜಗನ್ ಮೋಹನ್ ರೆಡ್ಡಿಯವರು 2016 ರಲ್ಲಿ ವಿರೋಧ ಪಕ್ಷದಲ್ಲಿದ್ದಾಗ ಅಂದಿನ ಸಿಎಂ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ವಿರುದ್ಧ ಅಮರಾವತಿ ಭೂಮಿ ಅಕ್ರಮದ ಆರೋಪ ಮಾಡಿದ್ದರು. ಜೊತೆಗೆ ನ್ಯಾಯಾಲಯದ ಬಗ್ಗೆಯೂ ಹಲವು ಟೀಕೆಗಳನ್ನು ಮಾಡಿದ್ದರು.
ಇವುಗಳ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಗನ್ ಮೋಹನ್ ರೆಡ್ಡಿ ಹೇಳಿಕೆಗಳನ್ನು ಆಧರಿಸಿ ಅನಂತಪುರ ಮತ್ತು ಗುಂಟೂರು ಜಿಲ್ಲೆಯಲ್ಲಿ ಕೆಲವು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಗಳ ಪರಿಶೀಲನೆ ನಡೆಸಿರುವ ಪೊಲೀಸರು, ಸಾಕ್ಷ್ಯಗಳ ಅನುಪಸ್ಥಿತಿಯಲ್ಲಿ ಅಂತಿಮ ವರದಿಗಳನ್ನು ಸಲ್ಲಿಸಿದ್ದಾರೆ.
ಜಗನ್ ವಿರುದ್ಧದ ಪ್ರಕರಣಗಳನ್ನು ರದ್ದುಗೊಳಿಸಲು ಯಾವುದೇ ಆಕ್ಷೇಪಣೆ ಇಲ್ಲ ಎಂದು ಅರ್ಜಿದಾರರು ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಕೆಳ ನ್ಯಾಯಾಲಯಗಳು ಪ್ರಕರಣಗಳನ್ನು ರದ್ದುಗೊಳಿಸಿದ್ದವು. ಆದರೆ, ನ್ಯಾಯಾಲಯದ ಆಡಳಿತ ಸಮಿತಿಯು ಅದರಲ್ಲಿ ದೋಷವನ್ನು ಕಂಡುಹಿಡಿದಿದ್ದು ಆಡಳಿತಾತ್ಮಕ ನಿರ್ಧಾರವನ್ನು ತೆಗೆದುಕೊಂಡಿದೆ. ಹೇಳಿಕೆಗಳ ಕುರಿತ ವರದಿ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿರುವ ಆಂಧ್ರ ಹೈಕೋರ್ಟ್ನ ನ್ಯಾಯಮೂರ್ತಿ ಕಣ್ಣಂಗೇಟಿ ಲಲಿತಾ, ಹೈಕೋರ್ಟ್ ಆಡಳಿತಾತ್ಮಕ ಸಮಿತಿ ಶಿಫಾರಸ್ಸಿನಂತೆ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಪೊಲೀಸರಿಗೆ ನೋಟಿಸ್ ನೀಡುವುದನ್ನು ತಡೆದಿದ್ದಾರೆ.
ಸಿಆರ್ಪಿಸಿ ಸೆಕ್ಷನ್ 397, 401, 482 ಮತ್ತು 483 ರ ಅಡಿಯಲ್ಲಿ ಹೈಕೋರ್ಟ್ ತನ್ನ ಅಧಿಕಾರವನ್ನು ಬಳಸಿಕೊಂಡು ಸುಮೋಟೋ ಕೇಸ್ ದಾಖಲಿಸಲು ಸಾಧ್ಯವಿಲ್ಲ. ನ್ಯಾಯಾಂಗ ಇತಿಹಾಸದಲ್ಲಿ ಮೊದಲ ಬಾರಿಗೆ ಆಡಳಿತಾತ್ಮಕ ನಿರ್ಧಾರವನ್ನು ಆಧರಿಸಿ ಸುಮೋಟೋ ಕೇಸ್ ದಾಖಲಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ಶ್ರೀರಾಮ್ ವಾದಿಸಿದ್ದಾರೆ.