ಸಮಗ್ರ ನ್ಯೂಸ್: ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ಮಹಿಳೆಯರ ಓಡಾಟ ಎಂದಿಗಿಂತ ತುಸು ಹೆಚ್ಚಿದೆ.
ಉಚಿತ ಪ್ರಯಾಣದ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆ ಜಾರಿಗೆ 14ನೇ ದಿನಕ್ಕೆ ಕಾಲಿಟ್ಟಿದ್ದು, ಇಲ್ಲಿಯವರೆಗೆ ಮಹಿಳೆಯರು ಪ್ರಯಾಣಿಸಿದ ಒಟ್ಟು ಮೌಲ್ಯ 166 ಕೋಟಿ ರೂಪಾಯಿಗೂ ಹೆಚ್ಚಾಗಿದೆ.
ಈ ನಡುವೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಲ್ಲಿಬೈಲ್ ಗ್ರಾಮದಲ್ಲಿ ಸರ್ಕಾರಿ ಬಸ್‌ಗೆ ಆನೆಯೊಂದು ಅಡ್ಡ ಬಂದಿದ್ದು, ಪ್ರಯಾಣಿಕರ ಗಾಬರಿಗೆ ಕಾರಣವಾಗಿದೆ. ಆದರೆ, ಎಲ್ಲರ ಕಿರುಚಾಟ ಕೇಳಿ ಆನೆ ಅಲ್ಲಿಂದ ಕಾಲ್ಕಿತ್ತಿದೆ. ಈ ವಿಡಿಯೊ ವಾಟ್ಸಪ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೊದಲ್ಲಿ ಆನೆಯನ್ನು ಕಂಡ ನೆಟ್ಟಿಗರು ತರಹೇವಾರು ಕಮೆಂಟ್ ಮಾಡುತ್ತಿದ್ದಾರೆ. ಬಹುಶಃ ಈ ಆನೆಯೂ ಉಚಿತ ಬಸ್‌ಗಾಗಿ ಕಾಯುತ್ತಾ ಇರಬೇಕು. ಒಳಗೆ ಸೀಟ್ ಸಿಗುತ್ತದೆಯೋ? ಇಲ್ಲವೋ ಎಂದು ನೋಡಲು ಹೋದಾಗ ಸಹ ಪ್ರಯಾಣಿಕರು ಕಿರುಚಾಡಿದ್ದನ್ನು ಕಂಡು ಸಹವಾಸವೇ ಸಾಕಪ್ಪಾ ಎಂದು ಓಡಿಹೋಗಿರಬೇಕು. ಈ ಮಹಿಳೆಯರು ಸೀಟ್ ಬಿಟ್ಟು ಕೊಡಬಹುದಿತ್ತು? ಆದರೆ, ಸೀಟ್ ಬಿಟ್ಟುಕೊಡದೆ ಕಿರುಚಾಡಿದ್ದಾರೆ ಎಂದೆಲ್ಲ ಕಮೆಂಟ್‌ಗಳನ್ನು ಮಾಡಿದ್ದಾರೆ.
ಚಿಕ್ಕಮಗಳೂರು-ಮೂಡಿಗೆರೆ ರಸ್ತೆಯ ಕೊಲ್ಲಿಬೈಲ್ ಬಳಿಯ ರಸ್ತೆ ಮೇಲೆ ಕಾಡಾನೆಯೊಂದು ನಿಂತಿತ್ತು. ಈ ವೇಳೆ ಅಲ್ಲಿಗೆ ಬಸ್ ಸಹ ಬಂದಿದೆ. ಬಸ್ ಬಂದಿದ್ದನ್ನು ಕಂಡ ಆನೆಯು ಸೀದಾ ಬಸ್‌ನತ್ತ ರಾಜ ಗಾಂಭೀರ್ಯವಾಗಿ ನಡೆದುಕೊಂಡು ಬಂದಿದೆ. ಹೀಗೆ ಆ ಆನೆಯು ಹತ್ತಿರ ಹತ್ತಿರಕ್ಕೆ ಬಂದಿದೆ.
ಇತ್ತ ಒಳಗೆ ಕುಳಿತಿರುವ ಪ್ರಯಾಣಿಕರಿಗೆ ಆತಂಕವಾಗಿದೆ. ಒಳಗಿರುವ ಮಹಿಳೆಯರು ಕಿರುಚಾಡಲಾರಂಭಿಸಿದ್ದಾರೆ. ಆಗ ಅಲ್ಲೇ ಇದ್ದ ಸಹ ಪ್ರಯಾಣಿಕರೊಬ್ಬರು, ಆ ಆನೆ ಏನೂ ಮಾಡುವುದಿಲ್ಲ. ಯಾರೂ ಕಿರುಚಾಡಬೇಡಿ. ಎಲ್ಲರೂ ಶಾಂತತೆಯಿಂದ ಇರಿ ಎಂದು ಹೇಳಿದ್ದಾರೆ. ಅಷ್ಟರಲ್ಲಿ ಆ ಆನೆ ಸಹ ಅಲ್ಲಿಂದ ಬಸ್ ಪಕ್ಕದಲ್ಲಿಯೇ ಹಾದು ಓಡಿ ಹೋಗಿದೆ. ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ.