ಸಮಗ್ರ ನ್ಯೂಸ್: ಶನಿವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಬಿ.ಸಿ.ರೋಡ್ ಸಮೀಪದ ಮಿತ್ತಬೈಲಿನ ಬಾಲಕನ ಮೃತದೇಹ ಶನಿವಾರ ತಡರಾತ್ರಿ ಕಳ್ಳಿಗೆ ಗ್ರಾಮದ ಕುಪ್ಪಿಲ ಎಂಬಲ್ಲಿ ಕೆರೆಯಲ್ಲಿ ಪತ್ತೆಯಾಗಿದೆ.
ಸ್ಥಳೀಯ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ, ಬಿ.ಸಿ.ರೋಡಿನ ಖಾಸಗಿ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿ ಅಝೀಂ (13) ಮೃತ ಬಾಲಕ.
ಬಾಲಕ ಶನಿವಾರ ಮಧ್ಯಾಹ್ನ ಪಾಣೆಮಂಗಳೂರಿನಲ್ಲಿರುವ ಅಜ್ಜಿ ಮನೆಗೆ ಬಂದಿದ್ದ. ಅಲ್ಲಿ ತನ್ನ ಸ್ನೇಹಿತರೊಂದಿಗೆ ಇದ್ದ ಬಾಲಕನನ್ನು ಸ್ಥಳೀಯರು ಗಮನಿಸಿದ್ದರು ಎನ್ನಲಾಗಿದೆ. ಆದರೆ ಮಧ್ಯಾಹ್ನದ ಬಳಿಕ ಬಾಲಕ ಕಾಣೆಯಾಗಿದ್ದ.
ಬಾಲಕನ ಕೈಯಲ್ಲಿದ್ದ ಮೊಬೈಲ್ ಗೆ ಪೋಷಕರು ಕರೆ ಮಾಡಿದ್ದು, ಬಾಲಕ ಕರೆ ಸ್ವೀಕರಿಸದ ಕಾರಣ ಆತಂಕಗೊಂಡ ಮನೆ ಮಂದಿ ಬಂಟ್ವಾಳ ನಗರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ಬಾಲಕನ ಕೈಯಲ್ಲಿದ್ದ ಮೊಬೈಲ್ ಟ್ರೇಸ್ ಮಾಡಿದಾಗ ದೊರೆತ ಮಾಹಿತಿಯಂತೆ ಕಳ್ಳಿಗೆ ಗ್ರಾಮದ ಕೆರೆಯ ಬಳಿ ಹುಡುಕಾಟ ನಡೆಸಿದಾಗ ಕೆರೆಯ ಸಮೀಪ ಬಾಲಕನ ವಸ್ತ್ರ, ಪಾದರಕ್ಷೆ ಹಾಗೂ ಮೊಬೈಲ್ ಪತ್ತೆಯಾಗಿದೆ. ಬಳಿಕ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಬಾಲಕನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.