ಸಮಗ್ರ ನ್ಯೂಸ್: ಕಾರ್ಕಳದಲ್ಲಿ ಸ್ಪರ್ಧಿಸಲು ಬಿಜೆಪಿ ಸಚಿವರು, ಶಾಸಕರು ತನುಮನ ಧನದ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸ್ಪೋಟಕ ಹೇಳಿಕೆ ನೀಡಿದ್ದಾರೆ,
‘ಸಚಿವ ಸುನಿಲ್ ಕುಮಾರ್ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿರುವವರೂ ಸೇರಿದಂತೆ ಬಿಜೆಪಿಯ ಕೆಲವು ಸಚಿವರು ಹಾಗೂ ಶಾಸಕರು ತನು-ಮನ-ಧನದ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ’ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
‘ನಕಲಿ ಹಿಂದುತ್ವ ಹಾಗೂ ಭ್ರಷ್ಟಾಚಾರದ ವಿರುದ್ಧ ನನ್ನ ಸ್ಪರ್ಧೆ. ಕಾರ್ಕಳದಲ್ಲಿ ಭ್ರಷ್ಟಾಚಾರರಹಿತ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಇಲ್ಲಿ ನನ್ನ ಗೆಲುವಿಗೆ ಪೂರಕವಾದ ವಾತಾವರಣ ಇದೆ’ ಎಂದರು.
‘ಕಾರ್ಕಳದಲ್ಲಿ ಈಗಾಗಲೇ ಕಚೇರಿಯನ್ನು ತೆರೆದಿದ್ದೇನೆ. ಚುನಾವಣೆಗಾಗಿ ಮೂರು ತಿಂಗಳಿಂದ ತಳಮಟ್ಟದ ಸಿದ್ಧತೆಯಲ್ಲಿ ತೊಡಗಿದ್ದೇನೆ. ಕ್ಷೇತ್ರದಾದ್ಯಂತ ಶೇ 50ರಷ್ಟು ಬೂತ್ ಕಮಿಟಿಗಳನ್ನು ರಚಿಸಲಾಗಿದೆ. ನನ್ನ ಗೆಲುವಿಗಾಗಿ ಶ್ರೀರಾಮ ಸೇನೆಯ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಇಷ್ಟು ವರ್ಷ ಹಿಂದುತ್ವಕ್ಕಾಗಿ ಹೋರಾಡಿರುವ ನಾನು ಚುನಾವಣೆಯಲ್ಲಿ ಗೆದ್ದು ವಿಧಾನಸಭೆಯಲ್ಲೂ ಈ ಹೋರಾಟ ಮುಂದುವರಿಸುತ್ತೇನೆ. ನನ್ನ ವಿರುದ್ಧ 109 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಹೆಚ್ಚಿನವು ರಾಜ್ಯದಲ್ಲಿ ಬಿಜೆಪಿ ಆಳ್ವಿಕೆ ಕಾಲದಲ್ಲೇ ದಾಖಲಾದವುಗಳು’ ಎಂದು ತಿಳಿಸಿದರು