ಸಮಗ್ರ ನ್ಯೂಸ್: ಭಾರತ ವನಿತೆಯರ ಕ್ರಿಕೆಟ್ ತಂಡ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಧೂರಿ ಶುಭಾರಂಭ ಮಾಡಿತು.
ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ತಂಡವನ್ನು ಏಳು ವಿಕೆಟ್ಗಳಿಂದ ಬಗ್ಗು ಬಡಿದ ಹರ್ಮನ್ಪ್ರೀತ್ ಕೌರ್ ಬಳಗ ಸಂಭ್ರಮಾಚರಣೆ ಮಾಡಿತು. ಜೆಮಿಮಾ ರೋಡ್ರಿಗಸ್ (53 ರನ್, 38 ಎಸೆತ) ಹಾಗೂ ರಿಚಾ ಘೋಷ್ (31 ರನ್, 20 ಎಸೆತ) ಸ್ಫೋಟಕ ಬ್ಯಾಟಿಂಗ್ ನಡೆಸಿ ಭಾರತ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.
ಇಲ್ಲಿ ನ್ಯೂಲ್ಯಾಂಡ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಭಾನುವಾರ (ಫೆ.12) ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ ಬಿಸ್ಮಾ ಮರೂಫ್ ನೇತೃತ್ವದ ಪಾಕಿಸ್ತಾನ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 149 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ ಬಳಗ ಇನ್ನೂ ಆರು ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ 151 ರನ್ ಬಾರಿಸಿ ಜಯ ಸಾಧಿಸಿತು.
ಭಾರತ ತಂಡ 38 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡರೆ 62ಕ್ಕೆ ಎರಡನೇ ವಿಕೆಟ್ ನಷ್ಟ ಮಾಡಿಕೊಂಡಿತು. 93 ರನ್ಗಳಿಗೆ 3 ವಿಕೆಟ್ ಪತನಗೊಳ್ಳುವುದರೊಂದಿಗೆ ಭಾರತ ತಂಡ ಆತಂಕಕ್ಕೆ ಬಿತ್ತು. ಆದರೆ, ರಿಚಾ ಹಾಗೂ ಜೆಮಿಮಾ ಪಾಕ್ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿ ಗೆದ್ದರು.