ಸಮಗ್ರ ನ್ಯೂಸ್: ಕೋವಿಡ್ ಸಾಂಕ್ರಾಮಿಕತೆಗೆ ಕಡಿವಾಣ ಹಾಕಲು ಬೂಸ್ಟರ್ ಡೋಸ್ ಆಗಿ ಅಭಿವೃದ್ಧಿಪಡಿಸಲಾಗಿರುವ ಮೂಗಿನ ಮೂಲಕ ನೀಡಲಾಗುವ ಭಾರತ್ ಬಯೋಟೆಕ್ನ ಇನ್ಕೋವ್ಯಾಕ್ ಲಸಿಕೆ ಜನವರಿ ನಾಲ್ಕನೇ ವಾರ ಮಾರುಕಟ್ಟೆಗೆ ಬರಲಿದೆ. ಈ ನಾಸಿಕ ಲಸಿಕೆ ಪಡೆಯಲು ಕೋವಿನ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಭಾರತ್ ಬಯೋಟೆಕ್ ಮಂಗಳವಾರ ಪ್ರಕಟಿಸಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಕೊಡಲಾಗುವ ಈ ಲಸಿಕೆಯ ಪ್ರತಿ ಡೋಸ್ ಬೆಲೆ 800 ರೂಪಾಯಿಯಾಗಿದ್ದು ತೆರಿಗೆ ಪ್ರತ್ಯೇಕವಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೊಡ್ಡ ಪ್ರಮಾಣದಲ್ಲಿ ಖರೀದಿಸಿದರೆ ಪ್ರತಿ ಡೋಸ್ಗೆ 325 ರೂಪಾಯಿಯಂತೆ ಒದಗಿಸಲಾಗುವುದೆಂದು ದೇಶದ ಪ್ರಮುಖ ಔಷಧ ತಯಾರಕ ಕಂಪನಿಗಳಲ್ಲಿ ಒಂದಾದ ಭಾರತ್ ಬಯೋಟೆಕ್ ಹೇಳಿದೆ.
ಇನ್ಕೋವ್ಯಾಕ್ ಲಸಿಕೆಯನ್ನು 18 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್ ಆಗಿ ನೀಡಲು ಬಿಡುಗಡೆ ಮಾಡಲಾಗುತ್ತದೆ. ಇನ್ಕೋವ್ಯಾಕ್, ಪ್ರಾಥಮಿಕ 2-ಡೋಸ್ ಆಗಿ ನೀಡಲು ಹಾಗೂ ವಿಜಾತೀಯ ಡೋಸ್ ಆಗಿಯೂ ನೀಡಲು ಒಪ್ಪಿಗೆ ಸಿಕ್ಕಿರುವ ಜಗತ್ತಿನ ಪ್ರಥಮ ನಾಸಿಕ ಲಸಿಕೆಯಾಗಿದೆ. ದೇಶದಾದ್ಯಂತ 14 ಸ್ಥಳಗಳಲ್ಲಿ 3ನೇ ಹಂತದ ಪರೀಕ್ಷೆ ಹಾಗೂ 9 ಸ್ಥಳಗಳಲ್ಲಿ ವಿಜಾತೀಯ ಪರೀಕ್ಷೆ ನಡೆಸಲಾಗಿದೆ ಎಂದು ಕಂಪನಿ ತಿಳಿಸಿದೆ. ಅಮೆರಿಕದ ಸೇಂಟ್ ಲೂಯಿಸ್ನ ವಾಷಿಂಗ್ಟನ್ ಯುನಿವರ್ಸಿಟಿ ಪಾಲುದಾರಿಕೆಯಲ್ಲಿ ಈ ವ್ಯಾಕ್ಸಿನ್ ಅಭಿವೃದ್ಧಿಪಡಿಸಲಾಗಿದೆ.