ಸಮಗ್ರ ನ್ಯೂಸ್: ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಹೆಬ್ ಮಲಿಕ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ನಿನ್ನೆಯಿಂದ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಸಾನಿಯಾ ಪೋಸ್ಟ್ ಮಾಡಿರುವ ಇನ್ಸ್ಟಾಗ್ರಾಂ ಸ್ಟೋರಿ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದ್ದು, ಸ್ಟಾರ್ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಗಟ್ಟಿಯಾಗಿದೆ.
ಅವಿನಾಶ್ ಆರ್ಯನ್ ಎಂಬುವರ ಸಾನಿಯಾರ ಇನ್ಸ್ಟಾಗ್ರಾಂ ಸ್ಟೋರಿಯನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಬರೆದಿರುವ ಸಾಲುಗಳ ಸಾರಾಂಶ ಈ ಮುಂದಿನಂತಿದೆ. ‘ಒಡೆದ ಹೃದಯಗಳು ಎಲ್ಲಿಗೆ ಹೋಗುತ್ತವೆ? ಅಲ್ಲಾನನ್ನು ಹುಡುಕಲು’ ಎಂದು ಸಾನಿಯಾ ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ. ಅಲ್ಲದೆ, ಕೊನೆಯಲ್ಲಿ ನಂಬಿಕೆಯ ಸೇವಕ ಎಂದು ಉಲ್ಲೇಖಿಸಿದ್ದಾರೆ. ಇದೀಗ ಈ ಸ್ಟೋರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. ಇಬ್ಬರ ನಡುವಿನ ಸಂಬಂಧದ ಬಗ್ಗೆ ಇನ್ನಷ್ಟು ಚರ್ಚೆಯಾಗುತ್ತಿದೆ.
ಸಾನಿಯಾ ಮತ್ತು ಮಲಿಕ್, ಕ್ರೀಡಾಲೋಕದ ಅತ್ಯಂತ ಸುಂದರವಾದ ಜೋಡಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸಾಂಪ್ರದಾಯಿಕ ಎದುರಾಳಿಗಳ ಆಟಗಾರರಿಬ್ಬರ ಪ್ರೇಮ ವಿವಾಹವು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟರೂ ಎಲ್ಲ ವಿವಾದಗಳನ್ನು ಬದಿಗೊತ್ತಿ 2010ರಲ್ಲಿ ಇಬ್ಬರೂ ಮದುವೆ ಆಗಿದ್ದಾರೆ. ದಂಪತಿಗೆ ಇಜಾನ್ ಮಿರ್ಜಾ ಮಲ್ಲಿಕ್ ಹೆಸರಿನ ಮಗನಿದ್ದಾನೆ. ಸದ್ಯ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಮಗ ಇಜಾನ್ಗೆ ಸಹ-ಪೋಷಕರಾಗಿದ್ದಾರೆ.
ಇಬ್ಬರ ನಡುವೆ ಏನು ನಡೆದಿದೆ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ, ಶೋಯೆಬ್, ತನ್ನ ಟಿವಿ ಶೋನಲ್ಲಿ ಸಾನಿಯಾಗೆ ಮೋಸ ಮಾಡಿದ್ದಾರೆ ಎಂದು ಕೆಲವು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಸುದ್ದಿಗೆ ಸಾನಿಯಾ ಆಗಲಿ ಅಥವಾ ಶೋಯೆಬ್ ಆಗಲಿ ಇನ್ನೂ ಪ್ರತಿಕ್ರಿಯಿಸಿಲ್ಲ.