ಸಮಗ್ರ ನ್ಯೂಸ್: ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಪ್ಲಾಟ್ ಫಾರಂನಿಂದ ಕೆಳಗೆ ಬಿದ್ದು ತಂದೆ, ಮಗ ಮೃತಪಟ್ಟ ಘಟನೆಯೊಂದು ಭದ್ರಾವತಿ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ 1ರಲ್ಲಿ ಘಟನೆ ನಡೆದಿದೆ.
ತಾಳಗುಪ್ಪ – ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿದ ಇಬ್ಬರು ಸಾವನ್ನಪ್ಪಿದರು. ರವಿವಾರ ರಾತ್ರಿ ರೈಲು ಹತ್ತುವಾಗ ಕಾಲು ಜಾರಿ ಬಿದ್ದು ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮೋಹನ್ ಪ್ರಸಾದ್ (70 ವ) ಮತ್ತು ಅಮರನಾಥ್ (30 ವ) ಮೃತರು ಎಂದು ಗುರುತಿಸಲಾಗಿದೆ.
ತಂದೆ ಮತ್ತು ಮಗ ರಾತ್ರಿ ರೈಲಿನಲ್ಲಿ ಬೆಂಗಳೂರಿಗೆ ಹೋಗಬೇಕಿತ್ತು. ನಿಲ್ದಾಣಕ್ಕೆ ಬಂದಾಗ ರೈಲು ಹೊರಟಿತ್ತು. ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಮಗ ಅಮರನಾಥ್ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಆತನ ರಕ್ಷಣೆಗೆ ಧಾವಿಸಿದ ಮೋಹನ್ ಪ್ರಸಾದ್ ಅವರು ರೈಲಿನ ಅಡಿಗೆ ಸಿಲುಕಿದ್ದಾರೆ ಎನ್ನಲಾಗಿದೆ.
ಮೋಹನ್ ಪ್ರಸಾದ್ ಅವರು ವಿಐಎಸ್ಎಲ್ ನಿವೃತ್ತ ನೌಕರರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ಭದ್ರಾವತಿಯಲ್ಲಿರುವ ಮಗನ ಮನೆಗೆ ಬಂದಿದ್ದರು ಎಂದು ಹೇಳಲಾಗಿದೆ.