ಸಮಗ್ರ ನ್ಯೂಸ್: ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆಯ ಏರುಮುಖ ಮುಂದುವರಿದಿದ್ದು ಮಾರುಕಟ್ಟೆಯಲ್ಲಿ ಒಕ್ಕಣ್ಣ ₹500ರ ಗಡಿ ತಲುಪಿದೆ.
ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಕೆಯ ನಾಗಲೋಟ ಮುಂದುವರಿಸಿದೆ. ಆದರೂ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಅಡಿಕೆ ಪೂರೈಕೆ ಕೊರತೆ ಉಂಟಾಗಿದೆ.
ಹೊಸ ಅಡಿಕೆ ಎರಡು ದಿನಕ್ಕೊಮ್ಮೆ ಕೆ.ಜಿ.ಗೆ 5 ರೂ.ನಂತೆ ಏರಿಕೆ ಕಾಣುತ್ತಿದ್ದು ಬೆಳೆಗಾರ ಮಾತ್ರ ಬೆಲೆ ಇನ್ನಷ್ಟು ಹೆಚ್ಚಳಕ್ಕೆ ಕಾಯುತ್ತಿದ್ದಾನೆ.
ಆ.18 ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ 465 ರೂ. ಧಾರಣೆ ಇದ್ದರೆ, ಬೆಳ್ಳಾರೆ ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 480 ರೂ. ಇತ್ತು. ಅಂದರೆ ಕೆ.ಜಿ.ಯೊಂದಕ್ಕೆ ಕ್ಯಾಂಪ್ಕೋಗಿಂತ 15 ರೂ.ನಷ್ಟು ಹೆಚ್ಚು ಧಾರಣೆ ಇತ್ತು.
ಹಳೆ ಅಡಿಕೆಗೆ ಕ್ಯಾಂಪ್ಕೋದಲ್ಲಿ ಕೆ.ಜಿ.ಗೆ 560 ರೂ., ಹೊರ ಮಾರುಕಟ್ಟೆಯಲ್ಲಿ 575 ರೂ. ಇತ್ತು. ಇಲ್ಲೂ ಕೂಡ ಕೆ.ಜಿ.ಅಡಿಕೆಯಲ್ಲಿ 15 ರೂ.ವ್ಯತ್ಯಾಸ ಇದೆ.
ಈಗಿನ ಧಾರಣೆ ಏರಿಕೆಯ ಟ್ರೆಂಡ್ ಗಮನಿಸಿದರೆ ಆಗಸ್ಟ್ ಅಂತ್ಯದೊಳಗೆ ಹೊಸ ಅಡಿಕೆ ಧಾರಣೆಯಂತೂ 500 ಗಡಿ ತಲುಪುವುದು ನಿಶ್ಚಿತವಾಗಿದ್ದು, ಗಣೇಶ ಚತುರ್ಥಿ ಹಬ್ಬದ ಬಳಿಕ ಇನ್ನಷ್ಟು ಬೆಲೆ ಏರುವ ಸಾಧ್ಯತೆ ಇದೆ.