ಪ್ರವಾದಿ ಬಗ್ಗೆ ಅವಹೇಳನಕಾರಿ ಟ್ವೀಟ್| ಬಿಜೆಪಿ ವಿರುದ್ದ ತಿರುಗಿ ಬಿದ್ದ ಕತಾರ್|

ಸಮಗ್ರ ನ್ಯೂಸ್: ಬಿಜೆಪಿಯ ಕೆಲ ನಾಯಕರು ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವ ಘಟನೆಗಳನ್ನು ಕತಾರ್ ದೇಶ ತುಸು ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ನಿಲುವಿನ ಸ್ಪಷ್ಟನೆ ಕೋರಿ ಕತಾರ್ ಸರಕಾರ ಭಾನುವಾರ ಭಾರತೀಯ ರಾಯಭಾರಿಗೆ ಕರೆ ಮಾಡಿದೆ.

Ad Widget ... ..

ಇದೇ ವೇಳೆ, ಕತಾರ್‌ನ ಭಾರತೀಯ ರಾಯಭಾರಿ ಕಚೇರಿ ಸ್ಪಷ್ಟನೆ ನೀಡಿದ್ದು, ನಾಯಕರ ಟ್ವೀಟ್‌ಗಳು ಭಾರತದ ಸರಕಾರದ ಅಧಿಕೃತ ಹೇಳಿಕೆಗಳೆನಿಸುವುದಿಲ್ಲ ಎಂದು ತಿಳಿಸಿದ್ಧಾರೆ.

Ad Widget

ಕತಾರ್‌ನ ವಿದೇಶಾಂಗ ಸಚಿವಾಲಯ ಬಿಜೆಪಿ ನಾಯಕರು ಮಾಡಿದ ನಿಂದನಾತ್ಮಕ ಟ್ವೀಟ್ ಕುರಿತು ಆಕ್ಷೇಪ ಎತ್ತಿರುವ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದವು. ಇದಕ್ಕೆ ಭಾರತೀಯ ರಾಯಭಾರಿ ಕಚೇರಿಯ ವಕ್ತಾರರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ನಮ್ಮದು ವಿವಿಧತೆಯಲ್ಲಿ ಏಕತೆ ಇರುವ ಸಂಸ್ಕೃತಿ. ಅದರಂತೆ ಭಾರತ ಸರಕಾರ ಎಲ್ಲಾ ಧರ್ಮಗಳನ್ನೂ ಗರಿಷ್ಠವಾಗಿ ಗೌರವಿಸುತ್ತದೆ. ಆಕ್ಷೇಪಾರ್ಯ ಹೇಳಿಕೆಗಳನ್ನು ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗಳ್ಳಲಾಗಿದೆ” ಎಂದು ತಿಳಿಸಿದ್ಧಾರೆ.

ರಾಯಭಾರಿ ದೀಪಕ್ ಮಿತ್ತಲ್ ಭಾನುವಾರ ಕತಾರ್ ವಿದೇಶಾಂಗ ಸಚಿವಾಲಯಕ್ಕೆ ಭೇಟಿ ನೀಡಿ ಸ್ಪಷ್ಟನೆ ಕೂಡ ನೀಡಿದ್ದಾರೆ. “ಟ್ವೀಟ್‌ಗಳು ಯಾವುದೇ ರೀತಿಯಲ್ಲೂ ಭಾರತ ಸರಕಾರದ ನಿಲುವನ್ನು ಪ್ರತಿಫಲಿಸುವುದಿಲ್ಲ. ಈ ಟ್ವೀಟ್‌ಗಳು ಯಾರೋ ಅಪ್ರಸ್ತುತ ಮಂದಿಯ ಅಭಿಪ್ರಾಯಗಳಾಗಿವೆ” ಎಂದು ಭಾರತೀಯ ರಾಯಭಾರಿ ಮನದಟ್ಟು ಮಾಡಿದರೆನ್ನಲಾಗಿದೆ.

ಗಮನಾರ್ಹ ಎಂದರೆ, ಭಾರತದ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಸದ್ಯ ಕತಾರ್ ದೇಶದ ಪ್ರವಾಸದಲ್ಲೇ ಇದ್ದಾರೆ. ಇಂದು ಅವರು ಕತಾರ್ ಪ್ರಧಾನಿ ಶೇಖ್ ಖಾಲಿದ್ ಬಿನ್ ಖಲೀಫಾ ಬಿನ್ ಅಬ್ದುಲ್ ಅಜೀಜ್ ಅಲ್ ಠಾನಿ ಅವರನ್ನು ಭೇಟಿಯಾಗಿದ್ದರು.

ವಿವಾದಿತ ಹೇಳಿಕೆ ನೀಡಿದ್ದವರ ಉಚ್ಛಾಟನೆ:

ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಮತ್ತು ಡೆಲ್ಲಿ ಬಿಜೆಪಿಯ ಮಾಧ್ಯಮ ಮುಖ್ಯಸ್ಥರಾಗಿದ್ದ ನವೀನ್ ಕುಮಾರ್ ಜಿಂದಾಲ್ ಅವರು ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಎನಿಸುವಂಥ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಟಿವಿ ಚರ್ಚಾ ಕಾರ್ಯಕ್ರಮದಲ್ಲಿ ನೂಪುರ್ ಶರ್ಮಾ ಹೇಳಿಕೆ ನೀಡಿದ್ದರೆ, ಜಿಂದಾಲ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಿಂದ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಇವರಿಬ್ಬರ ಹೇಳಿಕೆಗಳನ್ನು ಇಟ್ಟುಕೊಂಡು ಉತ್ತರಪ್ರದೇಶದ ಕಾನಪುರ್ ನಗರದಲ್ಲಿ ಜೂನ್ 3ರಂದು ಹಿಂಸಾಚಾರಗಳೂ ನಡೆದವು. ಇದು ಇನ್ನೂ ವಿಕೋಪಕ್ಕೆ ಹೋಗುವ ಮುನ್ನ ಇಂದು ಭಾನುವಾರ ಬಿಜೆಪಿ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದೆ. ಬಿಜೆಪಿ ಪಕ್ಷದ ಈ ಕ್ರಮವನ್ನು ಕತಾರ್ ಸರಕಾರ ಸ್ವಾಗತಿಸಿದೆ.

Leave a Comment

Your email address will not be published. Required fields are marked *