ಬೆಂಗಳೂರು: ಸಿಎಂ ನಿವಾಸದ ಬಳಿಯೇ ಡ್ರಗ್ ಡೀಲ್ ಮಾಡ್ತಿದ್ದ ಪೊಲೀಸರಿಬ್ಬರು ಬಂಧನವಾದ ಘಟನೆ ಬೆಳಕಿಗೆ ಬಂದಿದೆ.
ನಗರದ ಕೋರಮಂಗಲ ಠಾಣೆಯ ಸಿಬ್ಬಂದಿ ಸಂತೋಷ್ ಮತ್ತು ಶಿವಕುಮಾರ್ ಗಾಂಜಾ ಮಾರಾಟಕ್ಕೆ ಮುಂದಾಗಿದ್ದರು. ಈ ಇಬ್ಬರು ಪೇದೆಗಳು ಡ್ರಗ್ಸ್ ಪೆಡ್ಲರ್ ಗಳ ಮೂಲಕ ಗಾಂಜಾ ಖರೀದಿಸುತ್ತಿದ್ದರು.
ಈ ಇಬ್ಬರನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರ ಆರ್.ಟಿ.ನಗರದ ನಿವಾಸದ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಇಬ್ಬರು ಸಿಎಂ ನಿವಾಸದ ಬಳಿಯೇ ಗಾಂಜಾ ದಂಧೆಗೆ ಮುಂದಾಗಿದ್ದರು.
ಮೋಸ್ಟ್ ವಾಂಟೆಂಡ್ ಡ್ರಗ್ ಪೆಡ್ಲರ್ ಗಳಾದ ಅಖಿಲ್ ರಾಜ್ ಹಾಗೂ ಅಮ್ಜದ್ ಖಾನ್ ಬಳಿ ಗಾಂಜಾ ಖರೀದಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಸಂತೋಷ್ ಮತ್ತು ಶಿವಕುಮಾರ್ ಗಾಂಜಾ ಖರೀದಿಸಿದ ಬಳಿಕ ಡ್ರಗ್ಸ್ ಪೆಡ್ಲರ್ ಗಳಿಗೆ ಯಾವುದೇ ಹಣ ನೀಡಿರಲಿಲ್ಲ. ಹಣ ಕೇಳಿದ್ದಕ್ಕೆ ಅವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು.
ಈ ವೇಳೆ ಸಿಎಂ ಮನೆ ಬಳಿ ಗಸ್ತಿನಲ್ಲಿದ್ದ ಹೊಯ್ಸಳ ಸಿಬ್ಬಂದಿ ಅನುಮಾನದ ಮೇಲೆ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. . ಸದ್ಯ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.