ನವದೆಹಲಿ: ಕೃಷಿ ಮಸೂದೆಗಳನ್ನು ರದ್ದುಪಡಿಸಿ ಘೋಷಣೆ ಹೊರಡಿಸಿದ ಪ್ರಧಾನಿ ಮೋದಿಯವರ ನಿರ್ಧಾರದ ಸಂಬಂಧ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್, ಸಂಸತ್ನಲ್ಲಿ ಈ ನಿರ್ಧಾರವನ್ನು ಅಂಗೀಕರಿಸಿದ ಬಳಿಕವೇ ಸತ್ಯಾಗ್ರಹದ ಸ್ಥಳದಿಂದ ರೈತರು ತಮ್ಮ ಮನೆಗೆ ಮರಳಲಿದ್ದಾರೆ ಎಂದು ಹೇಳಿದ್ದಾರೆ.
ಕೃಷಿ ಮಸೂದೆ ವಾಪಸ್ ಪಡೆದುಕೊಂಡ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಾಕೇಶ್, ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಕಾನೂನು ಬದ್ಧಗೊಳಿಸುವುದು ಸೇರಿದಂತೆ ಇನ್ನೂ ಅನೇಕ ಬೇಡಿಕೆಗಳು ಹಾಗೆಯೇ ಉಳಿದಿದೆ. ಇವುಗಳ ಬಗ್ಗೆ ಪ್ರಧಾನಿ ಯಾವುದೇ ಮಾಹಿತಿ ನೀಡಿಲ್ಲ. ನಮ್ಮ ಸಂಪೂರ್ಣ ಕಾರ್ಯ ಮುಗಿದ ಬಳಿಕವೇ ನಾವು ಈ ಸ್ಥಳದಿಂದ ಹಿಂತಿರುಗಲಿದ್ದೇವೆ. ಸಂಸತ್ನಲ್ಲಿ ಈ ನಿರ್ಣಯ ಅಂಗೀಕಾರವಾಗುವವರೆಗೂ ಯಾವುದೇ ಹೇಳಿಕೆಗಳನ್ನು ನಾವು ನಂಬುವುದಿಲ್ಲ ಎಂದು ಹೇಳಿದ್ರು.
ಸಂಯುಕ್ತ ಕಿಸಾನ್ ಮೋರ್ಚಾ ಸಭೆಯನ್ನು ಇಂದು ನಡೆಸಲಾಗುತ್ತೆ. ಈ ಸಭೆಯಲ್ಲಿ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಪ್ರಧಾನಿ ಮೋದಿ ಹೇಳಿಕೆಯನ್ನು ನಾವು ಸಂಪೂರ್ಣವಾಗಿ ಸ್ವಾಗತಿಸುತ್ತಿಲ್ಲ. ಇದೊಂದು ಪ್ರಾರಂಭ ಎಂದಷ್ಟೇ ಹೇಳಬಲ್ಲೆವು ಅಂತಾ ರಾಕೇಶ್ ಟಿಕಾಯತ್ ಹೇಳಿದ್ದಾರೆ.