ಸಮಗ್ರ ನ್ಯೂಸ್:ನವಚೇತನ ಯುವಕ ಮಂಡಲ (ರಿ.) ಬೊಳುಬೈಲು ಇವರ ಸಹಭಾಗಿತ್ವದಲ್ಲಿ ನೂತನವಾಗಿ ಬೊಳುಬೈಲಿನಲ್ಲಿ ನಿರ್ಮಾಣಗೊಂಡ ಪ್ರಯಾಣಿಕರ ಬಸ್ಸು ತಂಗುದಾಣ ಉದ್ಘಾಟನಾ ಕಾರ್ಯಕ್ರಮವು ಜುಲೈ 13ರಂದು ನಡೆಯಿತು.
ನವಚೇತನ ಯುವಕ ಮಂಡಲದ ಅಧ್ಯಕ್ಷ ಪ್ರದೀಪ್ ಬೊಳುಬೈಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಾವಿತ್ರಿ ಗೋಪಾಲ್ ಅಡ್ಕಾರು ವಹಿಸಿದ್ದರು. ಕಾರ್ಯಕ್ರಮದ ಬಗ್ಗೆ ಮಾತನಾಡಿದ ಇವರು “ಯುವ ಸಮೂಹ ಸಮಾಜಮುಖಿಯಾಗಿ ಕೆಲಸ ಮಾಡುತ್ತಾ ಸಾಗಿದಲ್ಲಿ ಗ್ರಾಮಗಳ ಅಭಿವೃದ್ಧಿ ಸುಲಭ ಸಾಧ್ಯ. ಈ ನಿಟ್ಟಿನಲ್ಲಿ ಬೊಳುಬೈಲಿನ ಯುವಕ ಮಂಡಲದ ಸದಸ್ಯರ ಕಾರ್ಯ ಶ್ಲಾಘನೀಯ” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯೆ ಗೀತಾ ಗೋಪಿನಾಥ್ ಬೊಳುಬೈಲುರವರು ಆಗಮಿಸಿದ್ದರು. ಬಸ್ಸು ತಂಗುದಾಣ ನಿರ್ಮಾಣದ ಹಿಂದಿನ ಶ್ರಮದ ಕುರಿತಾಗಿ ವಿವರಿಸಿದರು. ಉಪಸ್ಥಿತರಿದ್ದ ಇನ್ನೊರ್ವ ಪಂಚಾಯತ್ ಸದಸ್ಯೆ ಗೀತಾ ಚಂದ್ರಹಾಸ, ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು ಇದರ ನಿರ್ದೇಶಕರಾದ ಕುಸುಮಾಧರ ಅರ್ಭಡ್ಕ ಮತ್ತು ನಿರಂಜನ ಬೊಳುಬೈಲು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯುವಕ ಮಂಡಲದ ಪೂರ್ವಾಧ್ಯಕ್ಷರುಗಳು, ಸದಸ್ಯರು ಹಾಗೂ ಊರಿನ ಬಂಧುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪೂರ್ವಾಧ್ಯಕ್ಷರಾದ ಪದ್ಮನಾಭ ನೆಕ್ರಾಜೆ ಸ್ವಾಗತಿಸಿ, ನಿತಿನ್ ಕುಮಾರ್ ಅರ್ಭಡ್ಕ ವಂದಿಸಿದರು. ನಿರ್ದೇಶಕ ಪ್ರವೀಣ ಕಾಟೂರು ನಿರೂಪಣೆ ಮಾಡಿದರು.







